ಹೊಸ ದಿಗಂತ ವರದಿ, ಮೈಸೂರು:
ಈ ಬಾರಿ ಮಳೆ ಕೈಕೊಟ್ಟು ಬರಗಾಲ ಆವರಿಸಿಕೊಂಡು, ರೈತರು ಬಿತ್ತಿದ್ದ ಬೆಳೆಗಳೆಲ್ಲಾ ನಷ್ಟಗೀಡಾದ ಕಾರಣ ರಾಜ್ಯ ಸರ್ಕಾರ ಈ ಬಾರಿ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಸಾಂಪ್ರದಾಯಿಕವಾಗಿ, ಕಡಿಮೆ ಖರ್ಚಿನಲ್ಲಿ ಆಚರಿಸುವುದಾಗಿ ಹೇಳಿತ್ತು. ಆದರೆ ದಸರಾ ಮಹೋತ್ಸವಕ್ಕೆ ಮಾಡಿರುವ ಖರ್ಚು, ವೆಚ್ಚಗಳನ್ನು ನೋಡಿದರೆ ದಸರಾವನ್ನು ಭರ್ಜರಿಯಾಗಿ,ಅದ್ಧೂರಿಯಾಗಿ ಮಾಡಿರುವುದು ಇದೀಗ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ದಸರಾದ ಅನುದಾನ ಮತ್ತು ವೆಚ್ಚದ ವಿವರಗಳನ್ನೊಳಗೊಂಡ ಪಟ್ಟಿಯಿಂದ ಕಂಡು ಬಂದಿದೆ. ಕಳೆದ ಬಾರಿಗಿಂತ ಈ ಬಾರಿಯೇ ದಸರಾಗೆ ಹೆಚ್ಚಾಗಿ ಖರ್ಚು ಮಾಡಲಾಗಿದೆ.
ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಖರ್ಚು ಮಾಡಿದೆ
ಸರಳ ಹಾಗೂ ಸಾಂಪ್ರದಾಯಿಕ ದಸರಾ ಆಚರಣೆ ಎಂದಿದ್ದ ಸರ್ಕಾರ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಖರ್ಚು ಮಾಡಿದೆ. ಈ ಸಂಬಂಧ ಶನಿವಾರ ಸಂಜೆ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾಧಿಕಾರಿ ಡಾ. ಕೆ. ವಿ.ರಾಜೇಂದ್ರ ದಸರಾದ ಖರ್ಚು ವೆಚ್ಚದ ಪಟ್ಟಿಯನ್ನು ಬಿಡುಗಡೆ ಮಾಡಿ ಮಾಹಿತಿ ನೀಡಿದರು.
ಕಳೆದ ಬಾರಿಯ ದಸರಾ ಮಹೋತ್ಸವದಲ್ಲಿ 26,08,88,819 ರೂಪಾಯಿ ಅನುದಾನ ಸಿಕ್ಕಿತ್ತು. ಒಟ್ಟು 28,74,49,058 ರೂಪಾಯಿ ವೆಚ್ಚವಾಗಿತ್ತು. 2023ನೇ ಸಾಲಿನಲ್ಲಿ ಒಟ್ಟಾರೆಯಾಗಿ 29,26,65,000 ರೂಪಾಯಿ ಅನುದಾನ ಲಭ್ಯವಾಗಿತ್ತು. ಇದರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 10 ಕೋಟಿ ಅನುದಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 15 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಪ್ರಾಯೋಜಕತ್ವದಿಂದ 2,25,70,000 ಮೊತ್ತ, ಟಿಕೆಟ್ ಮತ್ತು ಗೋಲ್ಡ್ ಕಾರ್ಡ್ ಮಾರಾಟದಿಂದ 1,19,95,000 ರೂ ಹಾಗೂ ಆಹಾರ ಮೇಳದಿಂದ 81 ಲಕ್ಷ ರೂ. ಬಂದಿದೆ.
ಈ ಬಾರಿಯ ದಸರಾ ಮಹೋತ್ಸವಕ್ಕೆ ಒಟ್ಟು 29,25,22,049 ರೂ. ಗಳನ್ನು ಖರ್ಚು ಮಾಡಲಾಗಿದೆ. ಇದರಲ್ಲಿ ವಿವಿಧ ದಸರಾ ಉಪಸಮಿತಿಗಳ ಕಾರ್ಯಕ್ರಮಗಳ ಆಯೋಜನೆಗೆ 27 ಕೋಟಿ 05 ಲಕ್ಷದ 22ಸಾವಿರದ 049ರೂ. ಗಳನ್ನು ಖರ್ಚು ಮಾಡಲಾಗಿದೆ. ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳಿಗೆ ದಸರಾ ಆಚರಣೆಗೆಂದು ಒಟ್ಟು 2ಕೋಟಿ 20 ಲಕ್ಷ ರೂ. ಗಳ ಅನುದಾನ ನೀಡಲಾಗಿದೆ.
ಯಾವ್ಯಾವುದಕ್ಕೆ ಎಷ್ಟು ಹಣ ಖರ್ಚು
ಸ್ವಾಗತ ಮತ್ತು ಆಮಂತ್ರಣ, ಸ್ಥಳಾವಕಾಶ, ಸಾರಿಗೆ, ಶಿಷ್ಟಾಚಾರಕ್ಕೆಂದು 3,22,56,688 ರೂ, ಮೆರವಣಿಗೆಗೆ 2 ಕೋಟಿ 45 ಲಕ್ಷರೂ, ಪಂಜಿನ ಕವಾಯಿತಿಗೆ 1 ಕೋಟಿ 24 ಲಕ್ಷರೂ, ಸ್ತಬ್ಧ ಚಿತ್ರಕ್ಕೆ 25 ಲಕ್ಷರೂ, ರೈತ ದಸರಾಗೆ 30 ಲಕ್ಷರೂ, ಸಾಂಸ್ಕೃತಿಕ ದಸರಾಗೆ 2 ಕೋಟಿ ರೂ, ಲಲಿತಾ ಕಲೆಗೆ 20 ಲಕ್ಷರೂ, ಕವಿಗೋಷ್ಠಿಗೆ 35 ಲಕ್ಷರೂ, ಯೋಗ ದಸರಾಗೆ 15 ಲಕ್ಷರೂ, ಯುವ ಸಂಭ್ರಮಕ್ಕೆ 2 ಕೋಟಿರೂ, ಯುವ ದಸರಾಗೆ 5 ಕೋಟಿ 88 ಲಕ್ಷರೂ, ಮಹಿಳಾ ಮತ್ತು ಮಕ್ಕಳ ದಸರಾಗೆ 35 ಲಕ್ಷರೂ, ಚಲನಚಿತ್ರೋತ್ಸವಕ್ಕೆ 45 ಲಕ್ಷರೂ, ಕುಸ್ತಿ ಪಂದ್ಯಾವಳಿಗೆ 45 ಲಕ್ಷರೂ, ಗಜಪಡೆಗೆಂದು ಅರಣ್ಯ ಇಲಾಖೆಗೆ 1,60,56,781 ರೂ, ರಂಗಾಯಣಕ್ಕೆ 10ಲಕ್ಷರೂಗಳನ್ನು ಖರ್ಚು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.