ಬರೋಬ್ಬರಿ 77 ವರ್ಷಗಳ ಬಳಿಕ ಕೆಂಚಲಗೂಡು ಗ್ರಾಮದಲ್ಲಿರುವ ದಲಿತರಿಗೆ ಸಿಕ್ಕಿತು ದೇವಾಲಯಗಳಿಗೆ ಪ್ರವೇಶ !

ಹೊಸ ದಿಗಂತ ವರದಿ, ಮೈಸೂರು:

ಮೈಸೂರು ತಾಲ್ಲೂಕಿನ ಕೆಂಚಲಗೂಡು ಗ್ರಾಮದ ದಲಿತರಿಗೆ ದೇಶಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳ ಬಳಿಕ ತಮ್ಮ ಗ್ರಾಮದಲ್ಲಿರುವ ದೇವಸ್ಥಾನಗಳಿಗೆ ಇದೀಗ ಪ್ರವೇಶ ಸಿಕ್ಕಿದೆ. ಶನಿವಾರ ಗ್ರಾಮದ ದಲಿತರು ಗ್ರಾಮದಲ್ಲಿರುವ ಮೂವರು ದೇವಸ್ಥಾನಗಳನ್ನು ಪ್ರವೇಶಿಸಿ, ಪೂಜೆ ಸಲ್ಲಿಸಿದ್ದಾರೆ.

ಮೈಸೂರು ನಗರದ ವರ್ತುಲ ರಸ್ತೆಯಿಂದ 4-5 ಕಿ.ಮೀ ದೂರದಲ್ಲಿರುವ ಕೆಂಚಲಗೂಡು ಗ್ರಾಮಕ್ಕೆ ಸುಮಾರು 500 ವರ್ಷಗಳ ಇತಿಹಾಸವಿದೆ. ಗ್ರಾಮದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ಲಕ್ಷ್ಮಿನಾರಾಯಣಸ್ವಾಮಿ, ಮಾಳಿಗಮ್ಮ ಹಾಗೂ ಮಾರಮ್ಮ ದೇವಸ್ಥಾನಗಳಿಗೆ ಇಲ್ಲಿಯ ತನಕ ದಲಿತರಿಗೆ ಪ್ರವೇಶಿಸಲು ಅವಕಾಶವೇ ಸಿಕ್ಕಿರಲಿಲ್ಲ. ಗ್ರಾಮದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದವರು ಈ ಮೂರು ದೇವಸ್ಥಾನಗಳಿಗೆ ತಮಗೆ ಪ್ರವೇಶ ನಿರಾಕರಿಸುತ್ತಿದ್ದಾರೆ. ಆ ಮೂಲಕ ಅಸ್ಪೃಶ್ಯತೆ ಆಚರಿಸುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮದಲ್ಲಿ ವಾಸಿಸುತ್ತಿರುವ ದಲಿತ ಕುಟುಂಬಗಳಿಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.

ಮುಜರಾಯಿ ಇಲಾಖೆಗೆ ಸೇರಿದ ಈ ಮೂರು ದೇವಸ್ಥಾನಗಳಲ್ಲಿ ನಮಗೆ ಇಲ್ಲಿಯ ತನಕ ಪ್ರವೇಶವನ್ನೇ ನೀಡಿಲ್ಲ. ಅಲ್ಲದೇ ನಮ್ಮ ದಲಿತ ಕೇರಿಗೆ ದೇವರ ಉತ್ಸವ ಕೂಡ ಬರುತ್ತಿಲ್ಲ. ದಲಿತರ ಬೀದಿಗೆ ದೇವರ ಉತ್ಸವ ಮೂರ್ತಿ ಬಂದರೆ ದೇವರು ಶಾಪ ಕೊಡುತ್ತಾರೆ. ಇದು ಸಂಪ್ರದಾಯವೆಂದು ಹೇಳಿಕೊಂಡು ನಮಗೆ ಎಲ್ಲಾ ಆಚರಣೆಗಳಿಂದ ದೂರವಿರಿಸಲಾಗಿದೆ. ನಾವು ದೇವರ ವಿರೋಧಿಗಳಲ್ಲ. ಹಬ್ಬ ಮಾಡುವವರ ವಿರೋಧಿಗಳೂ ಅಲ್ಲ. ಬರುವ ಜನವರಿ 14 ರಂದು ಗ್ರಾಮದಲ್ಲಿ ಸಂಕ್ರಾಂತಿ ಹಬ್ಬ ನಡೆಯುತ್ತಿದೆ. ಇದರ ಪ್ರಯುಕ್ತ ಅಂದು ಉತ್ಸವವನ್ನು ಏರ್ಪಡಿಸಲಿದ್ದು, ಈ ದೇವರ ಉತ್ಸವ ನಮ್ಮ ದಲಿತ ಬೀದಿಗೂ ಬರಲು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ದಲಿತ ಕುಟುಂಬಗಳು ಒತ್ತಾಯಿಸಿದ್ದವು.
ಇಂದು ಮನವಿಗೆ ಸ್ಪಂದಿಸಿದ ಮೈಸೂರು ತಾಲ್ಲೂಕು ಆಡಳಿತದ ಜಯಪುರ ನಾಡಕಚೇರಿಯ ಉಪ ತಹಸಿಲ್ದಾರ್ ನಿಂಗಪ್ಪ, ರೆವಿನ್ಯೂ ಇನ್ ಸ್ಪೆಕ್ಟರ್ ಲೋಹಿತ್, ವಿಲೇಜ್ ಅಕೌಂಟೆoಟ್ ಲೋಕೇಶ್, ಮೂರು ಮುಜರಾಯಿ ದೇವಾಲಯಗಳಿಗೆ ದಲಿತರಿಗೆ ಪ್ರವೇಶ ಕೊಡಿಸಿ, ದೇವಸ್ಥಾನದ ಅರ್ಚಕರಿಗೆ ಕಾನೂನಿನ ಅರಿವನ್ನು ಮೂಡಿಸಿದರು.
ಈ ಸಂದರ್ಭ ಜಿಲ್ಲಾ ರೈತ ಮುಖಂಡರಾದ ಪಿ.ಮರಂಕಯ್ಯ ಮತ್ತಿತರರು ಹಾಜರಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!