ಪ್ರತಿದಿನ ಒಂದೇ ರೀತಿಯ ಚಿತ್ರಾನ್ನ ತಿನ್ನೋದಕ್ಕಿಂತ ಸ್ವಲ್ಪ ಕಹಿ, ಸ್ವಲ್ಪ ಹುಳಿ, ಸ್ವಲ್ಪ ಖಾರದ ಸಮತೋಲನ ಹೊಂದಿರುವ ಹಾಗಲಕಾಯಿ ಚಿತ್ರಾನ್ನ ತಿನ್ಬಹುದು. ಜೀರ್ಣಕ್ರಿಯೆಗೆ ಒಳ್ಳೆಯದು, ದೇಹವನ್ನು ತಣ್ಣಗಾಗಿಸುವ ಗುಣ ಹೊಂದಿರುವ ಹಾಗಲಕಾಯಿ, ಅನ್ನದ ಜೊತೆ ಸೇರಿದಾಗ ರುಚಿಕರವಾಗಿಯೇ ಅಲ್ಲ, ಆರೋಗ್ಯಕರವಾಗಿಯೂ ಇರುತ್ತೆ.
ಬೇಕಾಗುವ ಪದಾರ್ಥಗಳು:
ಹಾಗಲಕಾಯಿ – 1 ದೊಡ್ಡದು
ಬೇಯಿಸಿದ ಅನ್ನ – 2 ಕಪ್
ಈರುಳ್ಳಿ – 1 (ಸಣ್ಣ ತುಂಡುಗಳು)
ಹಸಿಮೆಣಸು – 2
ಶುಂಠಿ – 1 ಟೀಸ್ಪೂನ್ (ಸಣ್ಣ ತುಂಡು)
ಹುಣಸೆ ಹಣ್ಣು – ಸ್ವಲ್ಪ
ಅರಿಶಿನ ಪುಡಿ – ¼ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಂತೆ
ಎಣ್ಣೆ – 2 ಟೇಬಲ್ ಸ್ಪೂನ್
ಸಾಸಿವೆ – 1 ಟೀಸ್ಪೂನ್
ಉದ್ದಿನ ಬೇಳೆ – 1 ಟೀಸ್ಪೂನ್
ಕಡಲೆಬೇಳೆ – 1 ಟೀಸ್ಪೂನ್
ಒಣ ಮೆಣಸಿನಕಾಯಿ – 2
ಕರಿಬೇವು – ಸ್ವಲ್ಪ
ಇಂಗು – ಚಿಟಿಕೆ
ಮಾಡುವ ವಿಧಾನ:
ಹಾಗಲಕಾಯಿಯನ್ನು ಉದ್ದವಾಗಿ ತೆಳ್ಳಗೆ ಕತ್ತರಿಸಿ, ಉಪ್ಪು ಹಾಕಿ 10 ನಿಮಿಷ ಬಿಡಿ. ನಂತರ ನೀರಿನಿಂದ ತೊಳೆಯಿರಿ. ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ, ಒಣಮೆಣಸಿನಕಾಯಿ, ಕರಿಬೇವು ಮತ್ತು ಇಂಗು ಹಾಕಿ ಒಗ್ಗರಣೆ ಮಾಡಿ. ಇದಕ್ಕೆ ಈರುಳ್ಳಿ, ಹಸಿಮೆಣಸು, ಶುಂಠಿ ಸೇರಿಸಿ ಹುರಿಯಿರಿ. ಈಗ ಹಾಗಲಕಾಯಿ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ಅರಿಶಿನ ಪುಡಿ, ಉಪ್ಪು ಸೇರಿಸಿ, ಕೊನೆಯಲ್ಲಿ ಹುಣಸೆ ನೀರು ಹಾಕಿ ಸ್ವಲ್ಪ ಕುದಿಯಲು ಬಿಡಿ. ಕೊನೆಗೆ ಬೇಯಿಸಿದ ಅನ್ನ ಸೇರಿಸಿ ನಿಧಾನವಾಗಿ ಮಿಶ್ರಣ ಮಾಡಿ.

