ಹೊಸ ದಿಗಂತ ವರದಿ, ದಾವಣಗೆರೆ:
ರಾಜ್ಯದಲ್ಲಿ ಬರಗಾಲವಿದ್ದರೂ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರಕ್ಕಾಗಿ ಕಚ್ಚಾಟವಿದೆ. ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಶಾಸಕರೇ ಬೇಸತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ಆಪರೇಷನ್ ಕಮಲ ಮಾಡದೆಯೇ ಸರ್ಕಾರ ಪತನವಾಗಲಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಭವಿಷ್ಯ ನುಡಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಕ್ಕೆ ಬಂದು 6 ತಿಂಗಳು ಕಳೆದಿದ್ದರೂ, ಇನ್ನೂ ಕಾಂಗ್ರೆಸ್ ಸರ್ಕಾರ ಟೇಕಾಫ್ ಆಗಿಲ್ಲ. ಸಿಎಂ, ಡಿಸಿಎಂ ಯಾರು ಆಗಬೇಕು ಎಂಬುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಕೈಗೊಂಡಿರುವ ಏತ ನೀರಾವರಿ, ರಸ್ತೆ ಕಾಮಗಾರಿ, ಕುಡಿಯುವ ನೀರಿನ ಯೋಜನೆಗಳೇ ಇಂದಿಗೂ ಪ್ರಗತಿಯಲ್ಲಿವೆ. ಅಭಿವೃದ್ಧಿ ಕಾರ್ಯಕ್ಕೆ ಅಗತ್ಯ ಅನುದಾನ ಸಿಗದ ಬಗ್ಗೆ ಕಾಂಗ್ರೆಸ್ ಶಾಸಕರೇ ಅಸಮಾಧಾನಗೊಂಡಿದ್ದಾರೆ. ಸಧ್ಯದ ಸ್ಥಿತಿ ನೋಡಿದರೆ ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಪತನವಾಗುವುದು ಖಚಿತ ಎಂದರು.
ಈವರೆಗೂ ರೈತರ ಖಾತೆಗೆ ಬರ ಪರಿಹಾರದ ಹಣ ಬಿಡುಗಡೆಯಾಗಿಲ್ಲ. ಪರಿಹಾರ ನೀಡಬೇಕಾದ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುತ್ತಿದ್ದಾರೆ. ರಾಜ್ಯಸರ್ಕಾರ ವರ್ಗಾವಣೆ ದಂಧೆ ಹಾಗೂ ಭ್ರಷ್ಠಾಚಾರದಲ್ಲಿ ಮುಳುಗಿದೆ. ಗೃಹಲಕ್ಷ್ಮೀ ಯೋಜನೆ ಹಣ ಇನ್ನೂ ಎಷ್ಟೋ ಮಹಿಳೆಯರ ಖಾತೆಗೆ ಬಂದಿಲ್ಲ. ಗೃಹಜ್ಯೋತಿ ಯೋಜನೆಯೂ ಸಮರ್ಪಕವಾಗಿ ಜಾರಿಯಾಗಿಲ್ಲ. ಶಕ್ತಿ ಯೋಜನೆಯಡಿ ಅಗತ್ಯಕ್ಕೆ ತಕ್ಕಂತೆ ಬಸ್ ವ್ಯವಸ್ಥೆ ಇಲ್ಲ. ಅನ್ನಭಾಗ್ಯದಡಿ 10 ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿದ್ದವು ಈಗಲೂ ಕೇಂದ್ರದ ಅಕ್ಕಿಯನ್ನೇ ನೀಡುತ್ತಿದ್ದಾರೆ. ಯುವನಿಧಿ ಯೋಜನೆ ಇನ್ನೂ ಜಾರಿಯಾಗಿಲ್ಲ. ಕಾಂಗ್ರೆಸಿನ ಗ್ಯಾರಂಟಿ ಯೋಜನೆಗಳು ಸಂಪೂರ್ಣ ವಿಫಲವಾಗಿವೆ ಎಂದು ಅವರು ಆರೋಪಿಸಿದರು.
ಹೊಸ ಪಿಂಚಣಿ ರದ್ದುಪಡಿಸಿ ಹಳೆ ಪಿಂಚಣಿ ವ್ಯವಸ್ಥೆ ತರುವುದಾಗಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದರು. ಇದ್ಯಾವುದೂ ಜಾರಿಯಾಗಿಲ್ಲ. ಒಂದು ಕೈಯಲ್ಲಿ ಕೊಟ್ಟಂತೆ ಮಾಡಿ ಇನ್ನೊಂದು ಕೈಯಲ್ಲಿ ಕಪಾಳಕ್ಕೆ ಹೊಡೆದು ಕಸಿದುಕೊಳ್ಳುವುದು ಕಾಂಗ್ರೆಸ್ಸಿನ ಜಾಯಮಾನವಾಗಿದೆ. ರೈತರ ಹೊಟ್ಟೆ ಮೇಲೆ ಬರೆ ಎಳೆದಿದ್ದಾರೆ. ಮದ್ಯದ ದರ ಏರಿಕೆ ಮಾಡಲಾಗಿದೆ. ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ವಿದ್ಯಾನಿಧಿ ಯೋಜನೆಯನ್ನು ತಡೆ ಹಿಡಿಯಲಾಗಿದೆ ಎಂದು ಅವರು ಟೀಕಿಸಿದರು.
ಕೆ.ಪಿ ಕಲ್ಲಿಂಗಪ್ಪ, ಪಿ.ಎಸ್.ರಾಜು, ಪ್ರವೀಣ್ ಜಾಧವ್, ಜಯರುದ್ರೇಶ್, ಬಸವರಾಜ್, ವೆಂಕಟೇಶ್, ಮಂಜುನಾಥ್, ಅಣಜಿ ಬಸವರಾಜ್ ಸುದ್ದಿಗೋಷ್ಠಿಯಲ್ಲಿದ್ದರು.