Tuesday, December 30, 2025

ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ, ಬಿಎನ್‌ಪಿ ನಾಯಕಿ ಖಲೀದಾ ಜಿಯಾ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶದ ರಾಜಕೀಯ ಇತಿಹಾಸದ ಅಪ್ರತಿಮ ನಾಯಕಿ, ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ ಅಧ್ಯಕ್ಷೆ ಹಾಗೂ ಮಾಜಿ ಪ್ರಧಾನಿ ಬೇಗಂ ಖಲೀದಾ ಜಿಯಾ (80) ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ.

ಕಳೆದ 36 ದಿನಗಳಿಂದ ಢಾಕಾದ ಅಪೋಲೋ ಆಸ್ಪತ್ರೆಯಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಇಂದು ಬೆಳಿಗ್ಗೆ 6 ಗಂಟೆಗೆ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ನವೆಂಬರ್ 23 ರಂದು ಹೃದಯ ಮತ್ತು ಶ್ವಾಸಕೋಶದ ಸೋಂಕಿನಿಂದಾಗಿ ಖಲೀದಾ ಜಿಯಾ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಅವರು ದೀರ್ಘಕಾಲದಿಂದ ಯಕೃತ್ತಿನ ಸಿರೋಸಿಸ್, ಸಂಧಿವಾತ, ಮಧುಮೇಹ ಸೇರಿದಂತೆ ಮೂತ್ರಪಿಂಡ ಮತ್ತು ಕಣ್ಣಿನ ಸಮಸ್ಯೆಗಳಿಂದ ಬಳಲುತ್ತಿದ್ದರು. ಬಾಂಗ್ಲಾದೇಶ ಮಾತ್ರವಲ್ಲದೆ ಯುಕೆ, ಯುಎಸ್, ಚೀನಾ ಮತ್ತು ಆಸ್ಟ್ರೇಲಿಯಾದ ತಜ್ಞ ವೈದ್ಯರ ತಂಡ ಇವರಿಗೆ ಚಿಕಿತ್ಸೆ ನೀಡುತ್ತಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಇಹಲೋಕ ತ್ಯಜಿಸಿದ್ದಾರೆ.

ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಖಲೀದಾ ಜಿಯಾ, ದೇಶದ ರಾಜಕೀಯದಲ್ಲಿ ಅಳಿಸಲಾಗದ ಛಾಪು ಮೂಡಿಸಿದವರು. ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಮುನ್ನಡೆಸಿ, ಭರ್ಜರಿ ಜಯದೊಂದಿಗೆ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಅವರ ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರು ಅಪಾರ ಭರವಸೆ ಹೊಂದಿದ್ದರು.

ಅವರ ನಿಧನಕ್ಕೆ ಬಿಎನ್‌ಪಿ ಪಕ್ಷದ ಮುಖಂಡರು ಹಾಗೂ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದು, ದೇಶವು ಒಬ್ಬ ಸಮರ್ಥ ಮತ್ತು ಜನಪ್ರಿಯ ನಾಯಕಿಯನ್ನು ಕಳೆದುಕೊಂಡಂತಾಗಿದೆ.

error: Content is protected !!