ಹೊಸದಿಗಂತ ಡಿಜಿಟಲ್ ಡೆಸ್ಕ್:
ಉದ್ಯಾನ ನಗರಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಗಾಳಿಯ ಗುಣಮಟ್ಟ ಆತಂಕಕಾರಿ ಮಟ್ಟಕ್ಕೆ ಕುಸಿಯುತ್ತಿದೆ. ಇಂದು ನಗರದ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ 174 ದಾಖಲಾಗಿದ್ದು, ಹಲವು ಬಡಾವಣೆಗಳಲ್ಲಿ ಸ್ಥಿತಿ ಇನ್ನೂ ಗಂಭೀರವಾಗಿದೆ. ವಿಶೇಷವಾಗಿ PM2.5 (88) ಮತ್ತು PM10 (124) ಮಟ್ಟವು ಆರೋಗ್ಯಕರ ಮಿತಿಯನ್ನು ಮೀರಿರುವುದು ಜನರಲ್ಲಿ ಭೀತಿ ಹುಟ್ಟಿಸಿದೆ.
ನಗರದಲ್ಲಿ ಸಂಚರಿಸುವ 1.2 ಕೋಟಿಗೂ ಅಧಿಕ ವಾಹನಗಳು ಹೊರಸೂಸುವ ಹೊಗೆ ಈ ಮಾಲಿನ್ಯಕ್ಕೆ ಪ್ರಮುಖ ಕಾರಣ. ಈ ಗಾಳಿಯಲ್ಲಿರುವ ಅತಿಸೂಕ್ಷ್ಮ ಕಣಗಳು (PM2.5) ನಮ್ಮ ಕೂದಲಿನ ಎಳೆಗಿಂತಲೂ 30 ಪಟ್ಟು ಸಣ್ಣದಾಗಿರುತ್ತವೆ. ಇವು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶ ಪ್ರವೇಶಿಸಿ, ಅಲ್ಲಿಂದ ರಕ್ತವನ್ನು ಸೇರುತ್ತಿವೆ.
AQI ಮಟ್ಟ 150 ದಾಟಿದರೆ ಕೇವಲ ಕೆಮ್ಮು, ನೆಗಡಿಯಲ್ಲದೆ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿರುತ್ತದೆ. ಪ್ರಸ್ತುತ ಬೆಂಗಳೂರಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ ಮಿತಿಗಿಂತ 5 ಪಟ್ಟು ಹೆಚ್ಚು ಮಾಲಿನ್ಯಕಾರಕ ಕಣಗಳಿರುವುದು ದೃಢಪಟ್ಟಿದೆ.

