ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಿಜೋರಾಂ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎಂಎನ್‌ಎಫ್ ಸೋಲು ಬಹುತೇಕ ಖಚಿತಗೊಂಡಿದೆ. ಜೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) 27 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಜನಾದೇಶ ಪಡೆದಿದೆ. ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ.
ಮಿಜೋ ನ್ಯಾಷನಲ್ ಫ್ರಂಟ್ (MNF) ಪಕ್ಷವು 10 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. 2 ಕ್ಷೇತ್ರಗಳಲ್ಲಿ ಬಿಜೆಪಿ (BJP), 1 ಕ್ಷೇತ್ರದಲ್ಲಿ ಮಾತ್ರವೇ ಕಾಂಗ್ರೆಸ್ (Congress) ಪ್ರಾಬಲ್ಯ ಮೆರೆದಿದೆ.
ಎಂಎನ್‌ಎಫ್ ಹಾಗೂ ಝಡ್‌ಪಿಎಂ ಹಾಗೂ ಕಾಂಗ್ರೆಸ್ ಪಕ್ಷಗಳು ತಲಾ 40 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ 13 ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನ ಹಾಕಿತ್ತು. ಮಿಜೋರಾಂನಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಆಮ್ ಆದ್ಮಿ ಪಕ್ಷ (ಎಎಪಿ) 4 ಕ್ಷೇತ್ರಗಳಲ್ಲಿ ಮಾತ್ರವೇ ಸ್ಪರ್ಧಿಸಿತ್ತು. 17 ಮಂದಿ ಪಕ್ಷೇತರರು ಪ್ರತಿನಿಧಿಸಿದ್ದರು.
ಇನ್ನೊಂದೆಡೆ, ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್) ಎನ್‌ಡಿಎ ಮೈತ್ರಿಕೂಟದಲ್ಲಿದ್ರೂ, ಅದು ಕೇಂದ್ರದಲ್ಲಿ ಮಾತ್ರ. ವಿಧಾನಸಭೆ ಚುನಾವಣೆಯಲ್ಲಿ ಮೋದಿ ಪ್ರಚಾರಕ್ಕೆ ಬಂದ್ರೆ ಅವರ ಜತೆ ವೇದಿಕೆ ಹಂಚಿಕೊಳ್ಳಲ್ಲ ಎಂದು ಮಿಜೋರಾಂ ಸಿಎಂ ಹಾಗೂ ಎಂಎನ್‌ಎಫ್ ಮುಖ್ಯಸ್ಥ ಝೋರಂತಂಗ ಹೇಳಿದ್ರು. ಆದರೆ, ಝೋರಂತಂಗ ಅವರು ತಮ್ಮ ಕ್ಷೇತ್ರದಲ್ಲೇ ಸೋಲನುಭವಿಸಿದ್ದಾರೆ.
ಹಾಲಿ ಮುಖ್ಯಮಂತ್ರಿ ಝೋರಂತಂಗಾ ಐಜ್ವಾಲ್ ಪೂರ್ವ-1 ಕ್ಷೇತ್ರದಲ್ಲಿ ಜೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) ನಾಯಕ ಲಾಲ್ತನ್ಸಂಗ ವಿರುದ್ಧ 2,101 ಮತಗಳಿಂದ ಸೋತರು.
ಸಿಎಂ ಮಾತ್ರವಲ್ಲದೆ, ಮಿಜೋರಾಂ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಆಡಳಿತಾರೂಢ ಎಂಎನ್‌ಎಫ್ ಸಹ ಅಧಿಕಾರ ಕಳೆದುಕೊಂಡಿದೆ.
ಈ ಮಧ್ಯೆ, ZPM ಮುಖ್ಯಸ್ಥ ಮತ್ತು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಲಾಲ್ದುಹೋಮ ಅವರು ಸರ್ಚಿಪ್‌ನಿಂದ ಗೆದ್ದಿದ್ದಾರೆ, MNF ನ ಜೆ ಮಲ್ಸಾಮ್‌ಜುವಾಲಾ ವಂಚವಾಂಗ್ ಅವರನ್ನು 2,982 ಮತಗಳಿಂದ ಸೋಲಿಸಿದ್ದಾರೆ. ಪಕ್ಷ ಅಧಿಕಾರಕ್ಕೆ ಬರುವ ಮುನ್ಸೂಚನೆ ಸಿಗುತ್ತಿದ್ದಂತೆ ಮಂಗಳವಾರ ಅಥವಾ ಬುಧವಾರ ರಾಜ್ಯಪಾಲರನ್ನು ಭೇಟಿಯಾಗಲಿದ್ದು, ಒಂದು ತಿಂಗಳೊಳಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಲಾಲ್ದುಹೋಮ ಹೇಳಿದ್ದಾರೆ.