ಹೊಸದಿಗಂತ ವರದಿ ಹುಬ್ಬಳ್ಳಿ:
ಉತ್ತರ ಕರ್ನಾಟಕ ಭಾಗದ ಏಳೆಂಟು ಜಿಲ್ಲೆಗೆ ಸಂಜೀವಿಯಾದ ಕಿಮ್ಸ್ ಆಸ್ಪತ್ರೆಗೆ ಸಾಕಷ್ಟು ಜನರು ಚಿಕಿತ್ಸೆಗೆ ಬರುತ್ತಾರೆ. ಆದರೆ ಸರ್ಕಾರದಿಂದ ಬೇಕಾದಷ್ಟು ಅನುದಾನ ಬರುತ್ತಿಲ್ಲ. ಆದ್ದರಿಂದ ಸರ್ಕಾರ ವಾರ್ಷಿಕವಾಗಿ 54 ಕೋಟಿ ಅನುದಾನ ನೀಡಬೇಕು ಎಂದು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರು ಆಸ್ಪತ್ರೆ ಸಮಾನವಾಗಿ ಕಿಮ್ಸ್ ಆಸ್ಪತ್ರೆ ಇದೆ. ಬೆಂಗಳೂರಿಗೆ 24 ಕೋಟಿ ರೂ., ಮೈಸೂರಿಗೆ 34ಕೋಟಿ ರೂ. ಹಾಗೂ ಕಿಮ್ಸ್ ಆಸ್ಪತ್ರೆಗೆ ಸರ್ಕಾರದಿಂದ ನೌಕರರ ವೇತನ ಬಿಟ್ಟು ಕೇವಲ 24 ಕೋಟಿ ಮಾತ್ರ ಅನುದಾನ ಬರುತ್ತದೆ. ಆದರೆ ಇದು ಯಾವುದಕ್ಕೂ ಸಾಲದು. ಔಷಧ ಖರ್ಚು ವಾರ್ಷಿಕ 40 ಕೋಟಿಗೂ ಹೆಚ್ಚು ಬೇಕಾಗುತ್ತದೆ. ಆದ್ದರಿಂದ ಹೆಚ್ಚಿನ ಅನುದಾನ ನೀಡಬೇಕು ಎಂಬುವುದು ನಮ್ಮ ಬೇಡಿಕೆಯಾಗಿದೆ ಎಂದರು.
ಕಿಮ್ಸ್‌ಗೆ ಬೇರೆ ಬೇರೆ ಜಿಲ್ಲೆಗಳಿಂದ ಜನರು ಬರುವುದರಿಂದ ಸರಕಾರ ಈ ಕಡೆ ಗಮನ ಹರಿಸಬೇಕು. ಕಿಮ್ಸ್ ತನ್ನ ಸ್ವಂತ ಗಳಿಕೆಯ ಮೂಲಕ 50 ಕೋಟಿಯಷ್ಟು ಗಳಿಸುತ್ತಿದೆ. ಅದರ ಮೂಲಕ ಔಷಧ, ಅಭಿವೃದ್ಧಿ ಕಾರ್ಯಗಳು ನಡೆದಿವೆ. ಈಗಾಗಲೇ ಈ ಕುರಿತು ಸರಕಾರಕ್ಕೆ ಮನವಿ ಕೂಡ ಮಾಡಲಾಗಿದ್ದು, ಸರಕಾರದಿಂದ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.