ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಕಾನೆ ಅರ್ಜುನ (Arjuna) ಇನ್ನೂ ನೆನಪು ಮಾತ್ರ. ಒಂಟಿ ಸಲಗದ ಜತೆ ಹೋರಾಡಿ ಮೃತಪಟ್ಟಿದ್ದ ಅರ್ಜುನನ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಜಿಲ್ಲೆಯ ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ ಗ್ರಾಮದ ಬಳಿ ನೆರವೇರಿಸಲಾಗಿದೆ.
ಮೊದಲು ಅರ್ಜುನನ ಕಳೆಬರಕ್ಕೆ ಅರ್ಚಕರು ಪೂಜೆ ಸಲ್ಲಿಸಿದರು. ಬಳಿಕ ಜಿಲ್ಲಾಡಳಿತದಿಂದ ಅರ್ಜುನನಿಗೆ ಸರ್ಕಾರಿ ಗೌರವ ಸಮರ್ಪಿಸಲಾಯಿತು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಗಿದೆ.
ಅಗಲಿದ ಅರ್ಜುನನಿಗೆ ಮಾವುತ ವಿನು ಕಣ್ಣೀಡುತ್ತಲೇ ಪ್ರದಕ್ಷಿಣಿ ಹಾಕಿ ಪೂಜೆ ಸಲ್ಲಿಸಿದ್ದಾರೆ. ಪೂಜೆ ಎಲ್ಲಾ ಮುಗಿದ ಮೇಲೆ ಜೆಸಿಬಿಯಿಂದ 15 ಅಡಿಗಳ ಆಳದವರೆಗೆ ಗುಂಡಿ ತೋಡಲಾಯಿತು. ಬಳಿಕ ಜೆಸಿಬಿ ಸಹಾಯದಿಂದ ಅರ್ಜುನನ ದೇಹವನ್ನ ಸಮಾಧಿಗೆ ಇಳಿಸಿ ಮಣ್ಣು ಮುಚ್ಚಲಾಗಿದೆ. 22 ವರ್ಷಗಳ ಕಾಲ ದಸರಾದಲ್ಲಿ 8 ಬಾರಿ ಯಶಸ್ವಿಯಾಗಿ ಅಂಬಾರಿ ಹೊತ್ತಿದ್ದ ಸಾಕಾನೆ ಅರ್ಜುನ ಹೀಗೆ ದುರಂತ ಅಂತ್ಯ ಕಂಡಿದ್ದು ದುಃಖದ ಸಂಗತಿ.
ಹಾಸನದ ಸಕಲೇಶಪುರದ ಯಸಳೂರಲ್ಲಿ, 20 ಕಾಡಾನೆಗಳ ಗುಂಪಿತ್ತು. ಈ ಗುಂಪಲ್ಲಿದ್ದ ಒಂಟಿ ಸಲಗ ಸೆರೆ ಹಿಡಿಯಲು, ಸಾಕಾನೆ ಅರ್ಜುನ ಸೇರಿದಂತೆ 6 ಆನೆಗಳಿಂದ ಆಪರೇಷನ್ ನಡೀತಿತ್ತು. ಗುಂಪಿನಿಂದ ಒಂಟಿ ಸಲಗ ಬೇರ್ಪಡಿಸಿ, ಅರಿವಳಿಕೆ ಮದ್ದು ನೀಡಿದ್ದರು. ಆದರೆ ಮದದಲ್ಲಿದ್ದ ಕಾಡಾನೆ, ಎಲ್ಲರ ಮೇಲೆ ದಾಳಿ ಮಾಡಿದೆ. ಈ ವೇಳೆ ಏಕಾಂಗಿಯಾಗಿ ಅರ್ಜುನ ಹೋರಾಟಕ್ಕೆ ಇಳಿದಿದ್ದಾನೆ. ಕಾಡಾನೆಯಿಂದ ತೀವ್ರವಾಗಿ ದಾಳಿಗೆ ಒಳಗಾದ ಅರ್ಜುನ ಅಲ್ಲೇ ಪ್ರಾಣ ಬಿಟ್ಟಿದ್ದಾನೆ.