ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯಲ್ಲಿ ಇಂದು ಜಮ್ಮು ಮತ್ತು ಕಾಶ್ಮೀರದ ಮೀಸಲಾತಿ ತಿದ್ದುಪಡಿ ಮಸೂದೆ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದ್ದಾರೆ.
ಟಿಎಂಸಿ ಸಂಸದ ಸೌಗತಾ ರೇ ಪ್ರಶ್ನೆಗ ಉತ್ತರಿಸಿದ ಅಮಿತ್ ಶಾ, ಈ ದೇಶದಲ್ಲಿ ಎರಡು ಪ್ರಧಾನಿ, ಎರಡು ಸಂವಿಧಾನ ಹಾಗೂ ಎರಡು ಧ್ವಜ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ. ಯಾರು ಇದನ್ನು ಮಾಡಿದ್ದಾರೋ, ಇದು ಬರಿ ತಪ್ಪಲ್ಲ ಪ್ರಮಾದ. ಈ ಪ್ರಮಾದವನ್ನು ಪ್ರಧಾನಿ ನರೇಂದ್ರ ಮೋದಿ ಸರಿಪಡಿಸಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.
1950 ರಿಂದ ಪದೇ ಪದೇ ಈ ವಿಚಾರ ಹೇಳುತ್ತಿದ್ದೇವೆ. ಈ ದೇಶಕ್ಕೆ ಒಂದು ಪ್ರಧಾನಿ, ಒಂದು ಸಂವಿಧಾನ ಹಾಗೂ ಒಂದು ಧ್ವಜ ಮಾತ್ರ ಇರಬೇಕು ಎಂದು ಹೇಳುತ್ತಲೇ ಬಂದಿದ್ದೇವೆ. ತಪ್ಪು ನಡೆದಿತ್ತು. ಅದನ್ನು ಪ್ರಧಾನಿ ನರೇಂದ್ರ ಮೋದಿ ಸರಿಮಾಡಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮಸೂದೆ ಕುರಿತು ಚರ್ಚೆಯಲ್ಲಿ ಮಾತನಾಡಿದ ಸೌಗತ್ ರಾಯ್ ಭಾರತದ ಮೊದಲ ಕೈಗಾರಿಕೆ ಮಂತ್ರಿ ಶ್ಯಾಮ್ ಪ್ರಸಾದ್ ಮುಖರ್ಜಿ ಘೋಷಣಾ ವಾಕ್ಯವನ್ನು ರಾಜಕೀಯ ಘೋಷಣೆ ಎಂದಿದ್ದಾರೆ. ಜವಾಹರ್ ಲಾಲ್ ನೆಹರೂ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಶ್ಯಾಮಪ್ರಸಾದ್ ಮುಖರ್ಜಿ, ಯಾವತ್ತೂ ಭಾರತಕ್ಕೆ ಒಂದು ಪ್ರಧಾನಿ, ಒಂದು ಸಂವಿಧಾನ, ಒಂದು ಧ್ವಜ( ಏಕ್ ಪ್ರಧಾನ್, ಏಕ್ ನಿಶಾನ್, ಏಕ್ ವಿಧಾನ್) ಎಂಬ ಘೋಷಣೆ ಮೊಳಗಿಸಿದ್ದರು. ಈ ಮೂಲಕ ಭಾರತ ಹಾಗೂ ಕಾಶ್ಮೀರದಲ್ಲಿ ಎರಡೆರಡು ಸಂವಿಧಾನ, ಎರೆಡೆರು ಪ್ರಧಾನಿಗಳು ಇರಲು ಸಾಧ್ಯವಿಲ್ಲ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಹೀಗಾಗಿ ಈ ಇಬ್ಬಗೆ ನೀತಿ ಸರಿಯಲ್ಲ ಎಂದು ತಮ್ಮದೇ ಸರ್ಕಾರದ ವಿರುದ್ಧ ಕಹಳೆ ಮೊಳಗಿಸಿದ್ದರು.
ಈ ಮಾತಿಗೆ ಕೆರಳಿದ ಅಮಿತ್ ಶಾ, ಭಾರತದಲ್ಲಿ ಎರಡು ಪ್ರಧಾನಿ, ಎರಡು ಸಂವಿಧಾನ ಹಾಗೂ ಎರಡು ಧ್ವಜ ಇರಲು ಸಾಧ್ಯವೇ ಎಂದು ಮರು ಪ್ರಶ್ನಿಸಿದ್ದಾರೆ.