ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಿಚಾಂಗ್ ಚಂಡಮಾರುತದ ಅಬ್ಬರಕ್ಕೆ ಚೆನ್ನೈ ಅಕ್ಷರಶಃ ನಲುಗಿ ಹೋಗಿದೆ. ಈಗಾಗಲೇ 12 ಮಂದಿ ಪ್ರವಾಹಕ್ಕೆ ಅಸುನೀಗಿದ್ದಾರೆ. ,
ಇತ್ತ ಸಂಕಷ್ಟದ ಸ್ಥಿತಿಯಲ್ಲಿ ಸಿಲುಕಿರುವ ಚೆನ್ನೈಗೆ ನೆರವಿನ ಹಸ್ತ ಚಾಚುವಂತೆ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಕರೆ ನೀಡಿದ್ದಾರೆ.
ಕಳೆದ 48 ಗಂಟೆಗಳಲ್ಲಿ ನಿರಂತರವಾಗಿ ಭಾರಿ ಮಳೆಯಾಗಿದೆ. ಮರಗಳು ಧರೆಗುಳಿದಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ ಮತ್ತು ರಸ್ತೆಗಳೆಲ್ಲ ನದಿಯಂತಾಗಿದ್ದು, ವಿದ್ಯುತ್ ಸಂಪರ್ಕ, ಮೊಬೈಲ್ ಸಿಗ್ನಲ್ ಮತ್ತು ನೀರಿನ ಪೂರೈಕೆ ಇಲ್ಲದೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಚೆನ್ನೈನ ಆದ್ಯಾರ್ ಮತ್ತು ಕೋಸಸ್ತಲೈ ನದಿ ಪಾತ್ರದ ಜನರು ತಮ್ಮ ಗ್ರಾಮಗಳನ್ನು ತೊರೆಯುವಂತೆ ಹೇಳಲಾಗಿದೆ. ಚೆನ್ನೈನ ವಿವಿಧೆಡೆ ಮಳೆ ನೀರು ಸಂಪೂರ್ಣವಾಗಿ ಹರಿದು ಹೋಗದ ಕಾರಣ ಜನರು ಮನೆಯೊಳಗೆ ಸಿಲುಕಿಕೊಂಡಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿವಿಧೆಡೆ ಮನೆಗಳ ಒಳಗಡೆ ನುಗ್ಗಿರುವ ಮಳೆ ನೀರು ಕಡಿಮೆಯಾಗದ ಪರಿಣಾಮ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ದೋಣಿಗಳ ಮೂಲಕ ನಾಗರಿಕರನ್ನು ರಕ್ಷಿಸುತ್ತಿದ್ದಾರೆ. ಚೆನ್ನೈನಲ್ಲಿ ಭಾರೀ ಮಳೆಗೆ ಕಾರುಗಳು ಮತ್ತು ವಾಹನಗಳು ಕೊಚ್ಚಿಹೋಗಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ವಾರ್ನರ್ ಮನವಿ
ಈ ಎಲ್ಲ ಭೀಕರ ದೃಶ್ಯಗಳನ್ನು ನೋಡಿ ಮರುಕ ವ್ಯಕ್ತಪಡಿಸಿರುವ ಕ್ರಿಕೆಟರ್ ವಾರ್ನರ್, ಚೆನ್ನೈಗಾಗಿ ನೆರವಿನ ಹಸ್ತ ಚಾಚುವಂತೆ ಕರೆ ನೀಡಿದ್ದಾರೆ. ಚೆನ್ನೈ ಪ್ರವಾಹದ ಭೀಕರ ದೃಶ್ಯಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ವಾರ್ನರ್, ಚೆನ್ನೈನ ವಿವಿಧೆಡೆ ಮಳೆ ನೀರು ಸಂಗ್ರಹವಾಗುತ್ತಿರುವುದು ಆತಂಕಕಾರಿ ಸಂಗತಿ. ಇದರಿಂದ ಬಾಧಿತರಾದ ಎಲ್ಲರ ರಕ್ಷಣೆಗೆ ನಾನು ಪ್ರಾರ್ಥಿಸುತ್ತೇನೆ. ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ. ಸಹಾಯ ಮಾಡುವ ಸ್ಥಿತಿಯಲ್ಲಿರುವ ಯಾರಾದರೂ ತಕ್ಷಣ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಲು ಮತ್ತು ಸಹಾಯ ಹಸ್ತ ಚಾಚಲು ಸಿದ್ಧರಾಗಿರಬೇಕೆಂದು ನಾನು ವಿನಂತಿಸುತ್ತೇನೆ. ನಾವೆಲ್ಲರೂ ಸೇರಿ ನಮ್ಮ ಕೈಲಾದಷ್ಟು ಸಹಾಯ ಮಾಡೋಣ ಎಂದಿದ್ದಾರೆ.