ಹೊಸದಿಗಂತ ವರದಿ ಕಡಬ:
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕು ಕೋಣಾಜೆ ಎಂಬಲ್ಲಿನ ಸಿಆರ್ಸಿ ಕಾಲೋನಿ ಬಳಿ ಹಸುವೊಂದರ ಕಳೇಬರ ಅಡಿಕೆ ತೋಟದಲ್ಲಿ ಗಾಯಗೊಂಡು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಈ ಭಾಗದಲ್ಲಿ ಕಳೆದ ಹಲವು ದಿನಗಳಿಂದ ಕಾಡಾನೆಗಳ ಹಾವಳಿ ಹೆಚ್ಚುತ್ತಿದೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಈ ನಡುವೆ ತಡರಾತ್ರಿ ತೋಟಕ್ಕೆ ನುಗ್ಗಿದ ಆನೆ ಈ ಹಸುವಿನ ಮೇಲೆ ದಾಳಿ ನಡೆಸಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ.
ಮೇಯಲು ಬಿಟ್ಟಿದ್ದ ಹಸು ಬೆಳಗ್ಗೆಯಾದರೂ ವಾಪಸ್ಸಾಗದ ಹಿನ್ನೆಲೆಯಲ್ಲಿ ಮನೆಮಂದಿ ಇಂದು ಹುಡುಕಾಟಕ್ಕೆ ಮುಂದಾಗಿದ್ದರು. ಈ ವೇಳೆ ಹಸು ಗಂಭೀರ ಗಾಯಗೊಂಡು ಸತ್ತುಬಿದ್ದಿರುವುದು ಕಂಡುಬಂದಿದೆ.
ಇದೇ ಪರಿಸರಸಲ್ಲಿ ಕೃಷಿ ಪೈಪ್ ಗಳಿಗೂ ಹಾನಿಯಾಗಿರುವುದು ಕಂಡಿದ್ದು, ಕಳೆದ ರಾತ್ರಿ ಆನೆ ಪಡೆ ಇಲ್ಲಿಗೆ ಲಗ್ಗೆಯಿಟ್ಟಿತ್ತು ಎಂಬ ಸಂಶಯ ಸ್ಥಳೀಯರಿಗಿದೆ.
ಸ್ವಷ್ಟ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಿದೆ.