ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಸಂವಿಧಾನ ನಿರ್ಮಾತೃ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಸ್ಮರಣಾರ್ಥ ಮಹಾಪರಿನಿರ್ವಾಣ ದಿನದ ಅಂಗವಾಗಿ ಪ್ರಧಾನಿ ಮೋದಿ ಇಂದು ಅಂಬೇಡ್ಕರ್ ಅವರನ್ನು ನೆನೆದು, ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಡಾ. ಬಿಆರ್ ಅಂಬೇಡ್ಕರ್ ಅವರ ಸ್ಮರಣಾರ್ಥ ಇಡೀ ದೇಶವು ಮಹಾಪರಿನಿರ್ವಾಣ ದಿನವನ್ನು ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಶೋಷಿತ ಮತ್ತು ಅವಕಾಶ ವಂಚಿತರ ಕಲ್ಯಾಣಕ್ಕಾಗಿ ಅಂಬೇಡ್ಕರ್ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ, ಅಂಬೇಡ್ಕರ್ ಅವರನ್ನು ಸ್ಮರಿಸಿ, ಸಂಸತ್ತಿನ ಸಂಕೀರ್ಣದಲ್ಲಿ ಅಂಬೇಡ್ಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, “ಬಾಬಾಸಾಹೇಬ್ ಅಂಬೇಡ್ಕರ್ ಅವರು ಭಾರತೀಯ ಸಂವಿಧಾನದ ಸೃಷ್ಟಿಕರ್ತ ಮತ್ತು ಸಾಮಾಜಿಕ ಸಾಮರಸ್ಯದ ಅಮರ ಬೆಂಬಲಿಗರಾಗಿದ್ದರು. ಶೋಷಿತರು ಮತ್ತು ವಂಚಿತರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಇಂದು ಅವರ ಮಹಾಪರಿನಿರ್ವಾಣ ದಿನ, ಅವರಿಗೆ ನನ್ನ ಗೌರವಪೂರ್ವಕ ನಮನಗಳು” ಎಂದು ಹೇಳಿದ್ದಾರೆ.
ಸ್ವಾತಂತ್ರ್ಯ ನಂತರ ಭಾರತೀಯ ಸಂವಿಧಾನವನ್ನು ರಚಿಸಿದ ಸಮಿತಿಯ ಏಳು ಸದಸ್ಯರಲ್ಲಿ ಅಂಬೇಡ್ಕರ್ ಕೂಡ ಒಬ್ಬರಾಗಿದ್ದರು. 1990ರಲ್ಲಿ ಅಂಬೇಡ್ಕರ್ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಮರಣೋತ್ತರವಾಗಿ ನೀಡಲಾಗಿದೆ.