ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ವಿದ್ಯುತ್ ಬಳಕೆದಾರರಿಗೆ ಹೊಸ ವರ್ಷದ ಉಡುಗೊರೆಯಾಗಿ ದರ ಏರಿಕೆಯ ಹೊರೆ ಬೀಳುವ ಸಾಧ್ಯತೆಯಿದೆ. ಆದರೆ ಇದನ್ನು ಕೆಇಆರ್‌ಸಿ “ದರ ಪರಿಷ್ಕರಣೆ” ಎಂದು ಕರೆಯುವ ಬದಲು “ಟಾಪ್-ಅಪ್” ಅಥವಾ “ಟ್ರೂ-ಅಪ್” ಎಂದು ಹೆಸರಿಸಿದೆ.
ಈ ಹಿಂದೆ ಪ್ರತಿ ವರ್ಷವೂ ವಿದ್ಯುತ್ ದರ ಪರಿಷ್ಕರಣೆಯಾಗುತ್ತಿತ್ತು. ಆದರೆ ಇನ್ನು ಮುಂದೆ ಮೂರು ವರ್ಷಕ್ಕೊಮ್ಮೆ ಮಾತ್ರ ಅಧಿಕೃತ ದರ ಪರಿಷ್ಕರಣೆ ನಡೆಯಲಿದೆ.
ಮಾರುಕಟ್ಟೆಯ ಏರಿಳಿತ ಮತ್ತು ಎಸ್ಕಾಂಗಳ ಬಾಕಿ ಹಣದ ಆಧಾರದ ಮೇಲೆ ಪ್ರತಿ ವರ್ಷ ಸಣ್ಣ ಪ್ರಮಾಣದ ಮೊತ್ತವನ್ನು (ಸುಮಾರು 8 ರಿಂದ 10 ಪೈಸೆ) “ಟಾಪ್-ಅಪ್” ರೂಪದಲ್ಲಿ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ.
ಕಲ್ಲಿದ್ದಲು ಪೂರೈಕೆ ಸ್ಥಿರವಾಗಿದ್ದು, ನವೀಕರಿಸಬಹುದಾದ ಇಂಧನಕ್ಕೆ ಆದ್ಯತೆ ನೀಡಿರುವುದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗಿದೆ. ಆದರೂ, ‘ಗೃಹ ಜ್ಯೋತಿ’ ಯೋಜನೆಯಡಿ ಉಚಿತ ವಿದ್ಯುತ್ ನೀಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ದರ ಕಡಿತದ ಲಾಭ ಸಿಗುವುದಿಲ್ಲ.
ರಾಜ್ಯದ ಎಸ್ಕಾಂಗಳು ಆರ್ಥಿಕ ಹೊರೆಯನ್ನು ತಗ್ಗಿಸಲು ಕೃಷಿ ಸಬ್ಸಿಡಿಯ ಮೊತ್ತವನ್ನು ಕಡಿಮೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿವೆ. ಪ್ರಸ್ತುತ ಪ್ರತಿ ಯೂನಿಟ್‌ಗೆ ಇರುವ 8.30 ಸಬ್ಸಿಡಿಯನ್ನು 7.70 ಕ್ಕೆ ಇಳಿಸಲು ಕೆಇಆರ್‌ಸಿಗೆ ಮನವಿ ಮಾಡಲಾಗಿದೆ. ಇದರಿಂದ ಸರ್ಕಾರಕ್ಕೆ ಸಬ್ಸಿಡಿ ಹೊರೆ ಕಡಿಮೆಯಾದರೂ, ಇಂಧನ ಇಲಾಖೆಯ ಲೆಕ್ಕಾಚಾರದಲ್ಲಿ ಮಹತ್ವದ ಬದಲಾವಣೆಯಾಗಲಿದೆ.

