ನೆಹರು ಮಾಡಿದ 2 ಪ್ರಮಾದಗಳೇ ಪಿಒಕೆ ಕಳೆದುಕೊಳ್ಳಲು ಕಾರಣ: ಲೋಕಸಭೆಯಲ್ಲಿ ಅಮಿತ್​ ಶಾ ವಾಗ್ದಾಳಿ

ಹೊಸದಿಗಂತ ಡಿಜಿಟಲ್‌ಡೆಸ್ಕ್:‌ 

ಹಲವು ದಶಕಗಳಿಂದ ಜಮ್ಮು ಮತ್ತು ಕಾಶ್ಮೀರ ಎದುರಿಸುತ್ತಿರುವ ಭದ್ರತಾ ಸವಾಲುಗಳಿಗೆ ಮಾಜಿ ಪ್ರಧಾನಿ (ದಿವಂಗತ) ಜವಾಹರಲಾಲ್ ನೆಹರು ಅವರೇ ಕಾರಣ ಎಂದು ಕೇಂದ್ರ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಗುಡುಗಿದ್ದಾರೆ.

ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ 2023 ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆ 2023 ಕುರಿತು ಮಾತನಾಡಿದ ಅವರು, ಈ ಹಿಂದೆ ಎರಡು ಪ್ರಮಾದಗಳನ್ನು ಎಸಗದಿದ್ದರೆ ಪಾಕ್ ಆಕ್ರಮಿತ ಕಾಶ್ಮೀರ ಅಸ್ತಿತ್ವಕ್ಕೆ ಬರುತ್ತಿರಲಿಲ್ಲ ಎಂದು ಹೇಳಿದ್ದಾರೆ.

ನಾನು ಸದನದಲ್ಲಿ ನಿಂತು ಜವಾಬ್ದಾರಿಯುತವಾಗಿ ಹೇಳುತ್ತೇನೆ, ಪ್ರಧಾನಿ ಜವಾಹರಲಾಲ್ ನೆಹರೂ ಅವರ ಅಧಿಕಾರಾವಧಿಯಲ್ಲಿ ಕಾಶ್ಮೀರವು ಎರಡು ಪ್ರಮಾದಗಳಿಂದಾಗಿ ಹಲವಾರು ವರ್ಷಗಳ ಕಾಲ ನರಳಿತು. ನಮ್ಮ ಪಡೆಗಳು ಗೆದ್ದಾಗ ಕದನ ವಿರಾಮ ಘೋಷಿಸಲಾಯಿತು. ಅಲ್ಲದೆ, ಪಿಒಕೆ ಅಸ್ತಿತ್ವಕ್ಕೆ ಬಂದದ್ದು ದೊಡ್ಡ ತಪ್ಪು. ಕದನ ವಿರಾಮವನ್ನು ಮೂರು ದಿನ ವಿಳಂಬ ಮಾಡಿದ್ದರೆ, ಪಿಒಕೆ ಭಾರತದ ಭಾಗವಾಗುತ್ತಿತ್ತು’ ಎಂದು ಶಾ ಹೇಳಿದರು.

ಎರಡನೆಯದು ನಮ್ಮ ಸಮಸ್ಯೆಯನ್ನು ಯುಎನ್ (ವಿಶ್ವ ಸಂಸ್ಥೆ) ಗೆ ಕೊಂಡೊಯ್ಯಲು ಮಾಡಿದ ಪ್ರಮಾದ ಎಂದು ಅವರು ಹೇಳಿದರು.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಸಮಸ್ಯೆ ಪಂಡಿತ್ ನೆಹರೂ ಅವರಿಂದ ಉಂಟಾಗಿದೆ. ಇಲ್ಲದಿದ್ದರೆ ಆ ಭಾಗ ಕಾಶ್ಮೀರಕ್ಕೆ ಸೇರುತ್ತಿತ್ತು. ನೆಹರೂ ಪಿಒಕೆಗೆ ಕಾರಣರಾಗಿದ್ದಾರೆ. ಕಾಶ್ಮೀರದ ಭಾಗವಾದ ಪಿಒಕೆ ಪ್ರತ್ಯೇಕವಾಗಲು ಹಾಗೂ ದೇಶವು ಅಪಾರ ಭೂಮಿ ಕಳೆದುಕೊಳ್ಳಲು ಅಂದಿನ ಪ್ರಧಾನಿ ನೆಹರೂ ಅವರೇ ಕಾರಣವೆಂದು ವಾಗ್ದಾಳಿ ನಡೆಸಿದರು.

ಮಾತು ಮುಂದುವರಿಸಿ, ಕಾಶ್ಮೀರಿ ಪಂಡಿತರ ವಲಸೆಗೆ ಕಾಂಗ್ರೆಸ್ ಕಾರಣ . ವೋಟ್ ಬ್ಯಾಂಕ್ ರಾಜಕಾರಣ ಇಲ್ಲದಿದ್ದರೆ ಈ ಘಟನೆಯನ್ನು ತಡೆಯಬಹುದಿತ್ತು ಎಂದರು.

ನೆಹರೂ ಕುರಿತು ಅಮಿತ್ ಶಾ ಅವರು ನೀಡಿದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಹಲವಾರು ಕಾಂಗ್ರೆಸ್ ಸೇರಿ ಪ್ರತಿಪಕ್ಷಗಳ ಸಂಸದರು ಸಭಾತ್ಯಾಗ ಮಾಡಿದರು.

ಕಾಂಗ್ರೆಸ್​ ಸೇರಿ ವಿರೋಧ ಪಕ್ಷಗಳ ಅಸಮಾಧಾನಕ್ಕೆ ಪ್ರತಿಕ್ರಿಯಿಸಿ ಶಾ, ‘ನಾನು ಹಿಮಾಲಯನ್ ಬ್ಲಂಡರ್​ (ಮಹಾ ಪ್ರಮಾದ) ಎಂದು ಹೇಳಿದ್ದರೆ, ಅವರು (ವಿರೋಧ ಪಕ್ಷಗಳ ಸಂಸದರು) ರಾಜೀನಾಮೆ ನೀಡಿ ಹೋಗುತ್ತಿದ್ದರು’ ಎಂದು ಶಾ ಲೇವಡಿ ಮಾಡಿದರು.

ಮಸೂದೆ ಅಂಗೀಕಾರ
ಲೋಕಸಭೆಯು ಬುಧವಾರ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿತು, ಇದು ಕಾಶ್ಮೀರಿ ವಲಸಿಗ ಸಮುದಾಯದಿಂದ ಇಬ್ಬರು ಸದಸ್ಯರನ್ನು ಮತ್ತು ಪಾಕ್ ಆಕ್ರಮಿತ ಕಾಶ್ಮೀರದಿಂದ (ಪಿಒಕೆ) ಸ್ಥಳಾಂತರಗೊಂಡ ವ್ಯಕ್ತಿಗಳನ್ನು ಪ್ರತಿನಿಧಿಸುವ ಒಬ್ಬರನ್ನು ಶಾಸಕಾಂಗ ಸಭೆಗೆ ನಾಮನಿರ್ದೇಶನ ಮಾಡಲು ಪ್ರಯತ್ನಿಸುತ್ತದೆ. ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ 2023 ಅನ್ನು ಕೂಡ ಅಂಗೀಕರಿಸಲಾಯಿತು.

ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ 2023 ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಮಸೂದೆ 2023 ರ ಕುರಿತ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಪಿಒಕೆ ನಮ್ಮದು. ಅಲ್ಲಿ 24 ಸೀಟುಗಳನ್ನು ಮೀಸಲಿಡಲಾಗಿದೆ. ‘ಈ ಹಿಂದೆ ಜಮ್ಮುವಿನಲ್ಲಿ 37 ಸೀಟುಗಳಿದ್ದವು, ಈಗ 43. ಈ ಹಿಂದೆ ಕಾಶ್ಮೀರದಲ್ಲಿ 46 ಇದ್ದವು, ಈಗ 47. ಅಲ್ಲದೆ, ಪಿಒಕೆಯಲ್ಲಿ 24 ಸ್ಥಾನಗಳನ್ನು ಕಾಯ್ದಿರಿಸಲಾಗಿದೆ, ಏಕೆಂದರೆ ಪಿಒಕೆ ನಮ್ಮದು’ ಎಂದು ಶಾ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!