ಫೋರ್ಬ್ಸ್ 2023ರ ಮೋಸ್ಟ್ ಪವರ್‌ ಫುಲ್‌ ವುಮೆನ್‌ ಪಟ್ಟಿ ರಿಲೀಸ್: ನಿರ್ಮಲಾ ಸೀತಾರಾಮನ್ ಸಹಿತ ನಾಲ್ವರು ಭಾರತೀಯರಿಗೆ ಸ್ಥಾನ!

ಹೊಸದಿಗಂತ ಡಿಜಿಟಲ್‌ಡೆಸ್ಕ್:‌

ಫೋರ್ಬ್ಸ್ 2023ರ ಮೋಸ್ಟ್ ಪವರ್‌ ಫುಲ್‌ ವುಮೆನ್‌ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ಒ ಳಗೊಂಡಿರುವ ಈ ಪಟ್ಟಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ನಾಲ್ಕು ಭಾರತೀಯ ಮಹಿಳೆಯರು ಸ್ಥಾನಗಳಿಸಿದ್ದಾರೆ.

ಹಣ, ಮಾಧ್ಯಮ, ಪ್ರಭಾವ ಆಧಾರದ ಮೇಲೆ ಫೋರ್ಬ್ಸ್ 2023ರ ಮೋಸ್ಟ್ ಪವರ್‌ ಫುಲ್‌ ವುಮೆನ್‌ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ನಾಲ್ವರು ಭಾರತೀಯರಿರುವುದು ಹೆಮ್ಮೆಯ ವಿಚಾರವಾಗಿದೆ.

ನಿರ್ಮಲಾ ಸೀತಾರಾಮನ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೋರ್ಬ್ಸ್ 2023ರ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ 32ನೇ ಸ್ಥಾನ ಪಡೆದಿದ್ದಾರೆ. ಭಾರತೀಯ ಜನತಾ ಪಾರ್ಟಿಯ ಹಿರಿಯ ಮುಖಂಡರಾಗಿರುವ ಇವರು 2019 ರಿಂದ ಭಾರತದ ಹಣಕಾಸು ಹಾಗೂ ಕಾರ್ಪೊರೇಟ್ ವ್ಯವಹಾರಗಳ ಸಚಿವರಾಗಿದ್ದಾರೆ. ಸೀತಾರಾಮನ್ ಅವರು 2017 ರಿಂದ 2019ರವರೆಗೆ 28​ನೇ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಇಂದಿರಾ ಗಾಂಧಿಯವರ ನಂತರ ಭಾರತದ ಎರಡನೇ ಮಹಿಳಾ ರಕ್ಷಣಾ ಮಂತ್ರಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಕಳೆದ ವರ್ಷ ನಿರ್ಮಲಾ ಸೀತಾರಾಮನ್ ಫೋರ್ಬ್ಸ್ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ 36ನೇ ಸ್ಥಾನದಲ್ಲಿದ್ದರು. ಆದರೆ ಈ ಬಾರಿ 32ನೇ ಸ್ಥಾನವನ್ನು ಪಡೆದಿದ್ದಾರೆ.

ರೋಶ್ನಿ ನಾಡರ್ ಮಲ್ಹೋತ್ರಾ
ರೋಶ್ನಿ ನಾಡರ್ ಮಲ್ಹೋತ್ರಾ ಫೋರ್ಬ್ಸ್ 2023ರ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ 60ನೇ ಸ್ಥಾನ ಪಡೆದಿದ್ದಾರೆ. ಭಾರತೀಯರಾದ ರೋಶ್ನಿ ನಾಡಾರ್, ಉದ್ಯಮಿ ಶಿವ ನಾಡಾರ್ ಅವರ ಬಿಲಿಯನೇರ್ ಪುತ್ರಿ ಆಗಿದ್ದಾರೆ. ಜುಲೈ 2020ರಲ್ಲಿ ಎಚ್‌ಸಿಎಲ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕಂಪನಿಯ ಎಲ್ಲಾ ಕಾರ್ಯತಂತ್ರದ ನಿರ್ಧಾರಗಳ ಉಸ್ತುವಾರಿ ವಹಿಸಿದ್ದಾರೆ. IIFL ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ (2019) ಪ್ರಕಾರ ಅವರು ಭಾರತದ ಅತ್ಯಂತ ಶ್ರೀಮಂತ ಮಹಿಳೆ ಎಂದು ಗುರುತಿಸಿಕೊಂಡಿದ್ದಾರೆ.

ಸೋಮಾ ಮೊಂಡಾಲ್
ಸೋಮಾ ಮೊಂಡಾಲ್ ಫೋರ್ಬ್ಸ್ 2023ರ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ 70ನೇ ಸ್ಥಾನ ಪಡೆದಿದ್ದಾರೆ. ಭಾರತೀಯ ಸ್ಟೀಲ್ ಅಥಾರಿಟಿಯಲ್ಲಿ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ. ಲೋಹದ ಉದ್ಯಮದಲ್ಲಿ 35 ವರ್ಷಗಳ ಅನುಭವ ಹೊಂದಿದ್ದಾರೆ. ವೃತ್ತಿಜೀವನದ ಮೈಲಿಗಲ್ಲುಗಳು ಸೋಮಾ ಮೊಂಡಾಲ್ SAIL ನಲ್ಲಿ ಮೊದಲ ಮಹಿಳಾ ಕಾರ್ಯಕಾರಿ ನಿರ್ದೇಶಕಿ ಮತ್ತು ಅಧ್ಯಕ್ಷರಾಗಿದ್ದಾರೆ. 2023ರಲ್ಲಿ ಇಟಿಪಿರೈಮ್ ಮಹಿಳಾ ನಾಯಕತ್ವ ಪ್ರಶಸ್ತಿಗಳಲ್ಲಿ ‘ವರ್ಷದ ಸಿಇಒ’ ಎಂದು ಗೌರವ ಪಡೆದಿದ್ದಾರೆ.

ಕಿರಣ್ ಮಜುಂದಾರ್-ಶಾ
ಕಿರಣ್ ಮಜುಂದಾರ್-ಶಾ ಫೋರ್ಬ್ಸ್ 2023ರ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ 76ನೇ ಸ್ಥಾನ ಪಡೆದಿದ್ದಾರೆ. ಕಿರಣ್ ಮಜುಂದಾರ್-ಶಾ ಪ್ರಮುಖ ಭಾರತೀಯ ಬಿಲಿಯನೇರ್ ಉದ್ಯಮಿ ಬೆಂಗಳೂರಿನಲ್ಲಿ ಬಯೋಕಾನ್ ಲಿಮಿಟೆಡ್ ಮತ್ತು ಬಯೋಕಾನ್ ಬಯೋಲಾಜಿಕ್ಸ್ ಲಿಮಿಟೆಡ್ ಸ್ಥಾಪಿಸಿದ ಅವರು ಯಶಸ್ವಿಯಾಗಿ ಮುನ್ನೆಡೆಸಿಕೊಂಡು ಬಂದಿದ್ದಾರೆ. ಜೈವಿಕ ತಂತ್ರಜ್ಞಾನ ಕಂಪನಿಗಳ ನಿರ್ವಹಣೆ ಜೊತೆಗೆ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಮಾಜಿ ಅಧ್ಯಕ್ಷರಾಗಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಗರಿಷ್ಠ ಮಟ್ಟದ ಸಾಧನೆಗೈದಿರುವ ಕಿರಣ್ ಮಜುಂದಾರ್-ಶಾ, 2019ರ ಫೋರ್ಬ್ಸ್ ರ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ 68ನೇ ಸ್ಥಾನ ಪಡೆದಿದ್ದರು. ಈ ಬಾರಿ 76ನೇ ಸ್ಥಾನ ಪಡೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!