ಕಾವೇರಿಗಾಗಿ ನಿಲ್ಲದ ಹೋರಾಟ: 13ನೇ ದಿನಕ್ಕೆ ಕಾಲಿಟ್ಟ ಸರದಿ ಉಪವಾಸ ಸತ್ಯಾಗ್ರಹ

ಹೊಸದಿಗಂತ ವರದಿ ಮಂಡ್ಯ:

ಕಾವೇರಿ ಜಲಾನಯನ ವ್ಯಾಪ್ತಿಯ ಜಲಾಶಯಗಳಲ್ಲಿ ನೀರಿನ ಸಂಗ್ರಹ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದ್ದರೂ, ತಮಿಳುನಾಡಿಗೆ ನೀರು ಹರಿಸುತ್ತಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಸರದಿ ಉಪವಾಸ ಸತ್ಯಾಗ್ರಹಕ್ಕೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿವೃತ್ತ ನೌಕರರು ಬೆಂಬಲ ಸೂಚಿಸಿ ಧರಣಿಯಲ್ಲಿ ಪಾಲ್ಗೊಂಡರು.

ನಗರದ ಸರ್ ಎಂ ವಿ ಪ್ರತಿಮೆ ಎದುರು 13ನೇ ದಿನದ ಉಪವಾಸ ಸತ್ಯಾಗ್ರಹದಲ್ಲಿ ಸಂಘದ ಅಧ್ಯಕ್ಷ ಕೆ.ಪಿ.ಅಶ್ವಿನ್ ಕುಮಾರ್, ಕಾರ್ಯದರ್ಶಿ ಅಲಕೆರೆ ಸತ್ಯಾನಂದಸ್ವಾಮಿ, ದೊಡ್ಡ ಗರುಡನಹಳ್ಳಿ ಬಸವರಾಜ್, ಮೋಡಚಾಕನಹಳ್ಳಿ ಎಂ. ಲೋಕೇಶ್, ವೈ. ಯರಹಳ್ಳಿ ದೇವೇಗೌಡ, ಮೈಸೂರಿನ ಎಸ್.ಕೆ.ರಮೇಶ್, ಸೋಮನಹಳ್ಳಿ ಎಸ್.ಕೆ ಸ್ವಾಮಿ, ಮಂಡ್ಯ ಹಾಲಹಳ್ಳಿ ಬಡಾವಣೆಯ ಬಿ.ಬಸವರಾಜ್ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.

ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿರುವ ಪರಿಣಾಮ ಕೃಷ್ಣರಾಜಸಾಗರ ಸೇರಿದಂತೆ ನಾಲ್ಕೂ ಜಲಾಶಯಗಳಲ್ಲಿನ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದಲ್ಲಿ ಮುಂಬರುವ ಬೇಸಿಗೆ ಕಾಲದಲ್ಲಿ ಜನ-ಜಾನುವಾರುಗಳಿಗೆ ಕುಡಿಯಲು ನೀರು ಸಹ ಸಿಗುವುದಿಲ್ಲ. ಸರ್ಕಾರ ಈ ಕೂಡಲೇ ನೆರೆರಾಜ್ಯಕ್ಕೆ ನೀರು ಹರಿಸುತ್ತಿರುವುದನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು.

ಕಾವೇರಿ ನದಿ ನೀರು ಹಂಚಿಕೆ ವಿಚಾರ ಜ್ವಲಂತ ಸಮಸ್ಯೆಯಾಗಿದ್ದು, ರಾಜ್ಯದ ಜನರ ಹಿತ ಕಾಪಾಡಲು ವಿಧಾನಮಂಡಲದ ಅಧಿವೇಶನದಲ್ಲಿ ಚರ್ಚೆ ಮಾಡದೆ ನಿರ್ಲಕ್ಷ್ಯ ವಹಿಸಿರುವ ಆಡಳಿತ ಮತ್ತು ಪ್ರತಿಪಕ್ಷ ನಾಯಕರ ವರ್ತನೆಯನ್ನು ಕಾವೇರಿ ಹೋರಾಟಗಾರರು ಖಂಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!