ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಮುದ್ರದ ಗಡಿಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಭಾರತದ 21 ಮೀನುಗಾರರನ್ನು ಶ್ರೀಲಂಕಾದ ನೌಕಾಪಡೆ ಅಧಿಕಾರಿಗಳು ಬಂಧಿಸಿರುವುದಾಗಿ ಮೀನುಗಾರಿಕಾ ಅಧಿಕಾರಿಯೊಬ್ಬರು ತಿಳಿಸಿದ್ಧಾರೆ.
ಬುಧವಾರ ತಡರಾತ್ರಿ ಶ್ರೀಲಂಕಾ ನೌಕಾಪಡೆ ಅಧಿಕಾರಿಗಳು ಮನ್ನಾರ್ ಮತ್ತು ಕೋವಿಲನನ್ ಈಶಾನ್ಯ ಸಮುದ್ರದಲ್ಲಿ ಭಾರತೀಯ ಮೀನುಗಾರರನ್ನು ಬಂಧಿಸಿದ್ದು, ಅವರ ದೋಣಿಗಳನ್ನು ವಶಕ್ಕೆ ಪಡೆದಿದ್ದಾರೆ.
2023ರಲ್ಲಿ ಒಟ್ಟು 195 ಮೀನುಗಾರರನ್ನು ಬಂಧಿಸಿರುವುದಾಗಿ ಶ್ರೀಲಂಕಾದ ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ. ಶ್ರೀಲಂಕಾದ ಸಮುದ್ರದ ಗಡಿಯನ್ನು ಉಲ್ಲಂಘಿಸಿದ್ದಕ್ಕೆ ಸಂಬಂಧಿಸಿದಂತೆ ದೋಣಿಗಳನ್ನು ವಶಕ್ಕೆ ಪಡೆದಿದ್ದಾರೆ.
ಪಾಕ್ ಜಲಸಂಧಿಯು ಭಾರತ ಹಾಗೂ ಶ್ರೀಲಂಕಾ ನಡುವಿನ ಜಲಗಡಿಯಾಗಿದ್ದು, ಎರಡು ದೇಶಗಳ ಮೀನುಗಾರರು ಇಲ್ಲಿ ಮೀನುಗಳನ್ನು ಹಿಡಿಯಲು ಬರುತ್ತಾರೆ. ಸಮುದ್ರದ ಗಡಿಯನ್ನು ಉಲ್ಲಂಘಿಸಿ ಮೀನುಗಳ ಬೇಟೆಯಾಡಿದ ಆರೋಪದ ಮೇಲೆ ಭಾರತದ ಮೀನುಗಾರರನ್ನು ಶ್ರೀಲಂಕಾದ ಅಧಿಕಾರಿಗಳು ಅನೇಕ ಬಾರಿ ಬಂಧಿಸಿದ್ದಾರೆ.