ಹೊಸದಿಗಂತ ವರದಿ, ಕಲಬುರಗಿ:
ಗೂಳಿಹಟ್ಟಿ ಶೇಖರ್ ಅವರ ಅವರ ಮಾತು ಸತ್ಯಕ್ಕೆ ಅತ್ಯಂತ ದೂರವಾಗಿದ್ದು, ಆರ್ ಎಸ್ ಎಸ್ ಜಾತ್ಯತೀತ ಹಾಗೂ ಸರ್ವಹಿತ ಕಾಪಾಡುವ ಸಂಘಟನೆಯಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ರಾಜಕುಮಾರ ಪಾಟೀಲ್ ತೆಲ್ಕೂರ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ಆರೆಸ್ಸೆಸ್ ಅಥವಾ ಸಂಘ ಪರಿವಾರದ ಯಾವುದೇ ಕಚೇರಿಯಲ್ಲಿ ಜಾತಿ, ವರ್ಗ ಕೇಳಿ ಒಳ ಬಿಡುವ ಪದ್ಧತಿಯಿಲ್ಲ.ಗೂಳಿಹಟ್ಟಿ ಶೇಖರ್ ಅವರ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಗಮನಿಸಿ ಕೇಳಿದ್ದೇನೆ. ಅವರ ಆರೋಪ ಶುದ್ಧ ಸುಳ್ಳು ಮತ್ತು ರಾಜಕೀಯ ದುರುದ್ದೇಶ ಎನಿಸುತ್ತದೆ ಎಂದರು.
ನಾನು ಆರ್ ಎಸ್ ಎಸ್ ನಲ್ಲಿ ವಿದ್ಯಾರ್ಥಿ ದೆಸೆಯಿಂದ ವಿದ್ಯಾರ್ಥಿ ಪರಿಷತ್ತಿನಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ಹೀಗಾಗಿ ರಾಷ್ಟ್ರ ಪ್ರೇಮ, ರಾಷ್ಟ್ರ ಭಕ್ತಿ ಮೆರೆಯುವ ಸಂಘದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವ ಕೆಲಸ ಮಾಡಲಾಗುತ್ತಿದೆ. ಗೂಳಿಹಟ್ಟಿಯವರು ಒಂದೆರಡು ಬೈಠಕ್ ನಲ್ಲಿ ಭಾಗಿಯಾದರೆ ಆರೆಸ್ಸೆಸ್ ಎಂತಹ ದೇಶ ಭಕ್ತ ಸಂಘಟನೆ ಎಂದು ಅವರಿಗೆ ತಿಳಿಯಲಿದ್ದು, ಬರುವುದಾದರೆ ಮುಕ್ತ ಅವಕಾಶ ಇದೆ ಎಂದರು.
ಸುಳ್ಳು ಹೇಳುವುದು, ಗಾಳಿಯಲ್ಲಿ ಗುಂಡು ಹಾರಿಸುವ ಪ್ರವೃತ್ತಿಯಿಂದ ಗೂಳಿಹಟ್ಟಿ ಸೇರಿದಂತೆ ಉಳಿದ ನಾಯಕರು ಹೊರ ಬರಬೇಕು. ಪುರಾವೆ, ದಾಖಲೆಗಳು ಇದ್ದಲ್ಲಿ ಮಾತನಾಡಬೇಕು. ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ನಾಯಕರು ತೋರಿದ ಅಗೌರವ ಏನು ಎನ್ನುವುದು ದೇಶದ ಜನತೆಗೆ ಗೊತ್ತಿದೆ. ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಇದೆ ಕಾಂಗ್ರೆಸ್ ಮತ್ತು ಅವರ ನಿಧನರಾದ ಸಂದರ್ಭದಲ್ಲಿ ಕಾಂಗ್ರೆಸ್ ತೋರಿದ ಅಗೌರವ ಇದು ಕಾಂಗ್ರೆಸ್ ಬಾಬಾ ಸಾಹೇಬರನ್ನು ಕಂಡ ರೀತಿ ಎಂದರು.