ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣದ (Telangana) ನೂತನ ಮುಖ್ಯಮಂತ್ರಿಯಾಗಿ (CM) ರೇವಂತ್ ರೆಡ್ಡಿ (Revanth Reddy) ಅಧಿಕಾರ ವಹಿಸಿಕೊಂಡಿದ್ದು, ಇದಾದ ಕೆಲವೇ ನಿಮಿಷಗಳಲ್ಲಿ ತಮ್ಮ ಪ್ರಚಾರದ ವೇಳೆ ನೀಡಿದ್ದ ಪ್ರಮುಖ ಭರವಸೆಯೊಂದನ್ನು ಈಡೇರಿಸಿದ್ದಾರೆ.
ರೇವಂತ್ ರೆಡ್ಡಿ ಅವರು ತಮ್ಮ ಅಧಿಕೃತ ನಿವಾಸದ ಮುಂಭಾಗವಿರುವ ಕಬ್ಬಿಣದ ಬ್ಯಾರಿಕೇಡ್ ಅನ್ನು ತೆಗೆಸಿದ್ದಾರೆ. ಪ್ರಮಾಣವಚನ ಸ್ವೀಕಾರ ಸಮಾರಂಭ ಮುಗಿಯುವುದಕ್ಕೂ ಮೊದಲೇ ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾದ ಹೈದರಾಬಾದ್‌ನ ಪ್ರಗತಿ ಭವನದಲ್ಲಿ ಬಿರುಸಿನ ಚಟುವಟಿಕೆ ನಡೆದಿದೆ.
ಈ ಬ್ಯಾರಿಕೇಡ್ ಹಿಂದೆ ಪಾದಚಾರಿಗಳ ಪ್ರವೇಶವನ್ನು ನಿರ್ಬಂಧಿಸುತ್ತಿತ್ತು. ಹಲವು ವರ್ಷಗಳಿಂದ ಈ ಬ್ಯಾರಿಕೇಡ್‌ನಿಂದಾಗಿ ಚಲಿಸುವ ವಾಹನಗಳ ದಟ್ಟಣೆಯೂ ಉಂಟಾಗುತ್ತಿತ್ತು. ಈ ಹಿನ್ನೆಲೆ ರೇವಂತ್ ರೆಡ್ಡಿ ತಮ್ಮ ಚುನಾವಣಾ ಪ್ರಚಾರದ ವೇಳೆ, ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಬ್ಯಾರಿಕೇಡ್ ಅನ್ನು ತೆಗೆಸುವುದಾಗಿ ಭರವಸೆ ನೀಡಿದ್ದರು. ಇದೀಗ ಪ್ರಮಾಣವಚನ ಸ್ವೀಕರಿಸುತ್ತಲೇ ಅವರು ತಮ್ಮ ಮೊದಲ ಭರವಸೆಯನ್ನು ಪೂರೈಸಿದ್ದಾರೆ.