ಹೊಸದಿಗಂತ ಡಿಜಿಟಲ್ ಡೆಸ್ಕ್:
ಸತತವಾಗಿ ಏರಿಕೆ ಕಾಣುತ್ತಿದ್ದ ಚಿನ್ನ ಮತ್ತು ಬೆಳ್ಳಿಯ ಬೆಲೆ ಇದೀಗ ಗ್ರಾಹಕರಿಗೆ ಕೊಂಚ ನಿರಾಳ ತಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರಿಳಿತದ ಪರಿಣಾಮವಾಗಿ ಭಾರತದಲ್ಲೂ ಸತತ ಎರಡನೇ ಬಾರಿಗೆ ಚಿನ್ನದ ದರ ಇಳಿಕೆಯಾಗಿದೆ. ಇದರ ಬೆನ್ನಲ್ಲೇ ಬೆಳ್ಳಿ ಬೆಲೆಯೂ ಹಠಾತ್ ಕುಸಿತ ಕಂಡಿರುವುದು ವಿಶೇಷ.
ದೇಶಾದ್ಯಂತ ಹಳದಿ ಲೋಹದ ಹೊಳಪು ತುಸು ಕಡಿಮೆಯಾಗಿದ್ದು, ಬೆಲೆ ಹೀಗಿದೆ:
22 ಕ್ಯಾರಟ್ ಚಿನ್ನ (10 ಗ್ರಾಂ): 1,24,850
24 ಕ್ಯಾರಟ್ ಅಪರಂಜಿ ಚಿನ್ನ (10 ಗ್ರಾಂ): 1,36,200
ಬೆಂಗಳೂರಿನಲ್ಲೂ ಸಹ 10 ಗ್ರಾಂ ಚಿನ್ನದ ಬೆಲೆ 1,24,850 ರಷ್ಟಿದ್ದು, ಹೂಡಿಕೆದಾರರು ಮತ್ತು ಒಡವೆ ಖರೀದಿದಾರರಿಗೆ ಇದು ಉತ್ತಮ ಅವಕಾಶವಾಗಿದೆ.
ಕಳೆದ ಕೆಲವು ದಿನಗಳಿಂದ ನಾಗಾಲೋಟದಲ್ಲಿದ್ದ ಬೆಳ್ಳಿಯ ಬೆಲೆ ಈಗ ದಿಢೀರನೆ ಕುಸಿದಿದೆ. 100 ಗ್ರಾಂ ಬೆಳ್ಳಿಯ ಬೆಲೆಯ ಮೇಲೆ ಒಮ್ಮೆಗೆ 1,800 ರೂಪಾಯಿ ಇಳಿಕೆಯಾಗಿದ್ದು, ಪ್ರಸ್ತುತ 24,000 ಕ್ಕೆ ತಲುಪಿದೆ. ತಮಿಳುನಾಡು ಮತ್ತು ಕೇರಳದಂತಹ ಕೆಲವು ರಾಜ್ಯಗಳಲ್ಲಿ ಬೆಳ್ಳಿ ಬೆಲೆ 25,800 ರ ಆಸುಪಾಸಿನಲ್ಲಿದೆ.
ಕೇವಲ ಭಾರತದಲ್ಲಿ ಮಾತ್ರವಲ್ಲದೆ, ಜಾಗತಿಕ ಮಟ್ಟದಲ್ಲೂ ಆರ್ಥಿಕ ಬದಲಾವಣೆಗಳಿಂದಾಗಿ ಲೋಹದ ಬೆಲೆಗಳು ಗಣನೀಯವಾಗಿ ತಗ್ಗುತ್ತಿವೆ. ಮಾರುಕಟ್ಟೆಯ ಈ ಟ್ರೆಂಡ್ ಮುಂದಿನ ದಿನಗಳಲ್ಲಿ ಹೇಗೆ ಬದಲಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

