ಹೊಸದಿಗಂತ ವರದಿ,ಮಂಗಳೂರು:
ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರಿಗೆ ತುಳುನಾಡು ಮತ್ತು ಕರಾವಳಿಯ ನಂಟಿದೆ.
ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಜನಿಸಿದ ಲೀಲಾವತಿ ಅವರು ಸಿನೆಮಾದ ಬಗ್ಗೆ ಅಪಾರ ಆಸಕ್ತಿ ಹೊಂದಿದವರು. 1938 ರಲ್ಲಿ ಹುಟ್ಟಿದ ಅವರು ಕ್ರೈಸ್ತ ಕುಟುಂಬದ ಆರೈಕೆಯಲ್ಲಿ ಬೆಳೆದು ಲಿಲ್ಲಿ, ಲೀಲಾ ಕಿರಣ್ ನಂತರ ಲೀಲಾವತಿಯಾದರು.
ಬಾಲ್ಯದಲ್ಲಿ ಮನೆ ಕೆಲಸ ಸೇರಿದಂತೆ ಸಣ್ಣಪುಟ್ಡ ಕೆಲಸ ಮಾಡಿಕೊಂಡು ಮಂಗಳೂರಿನ ಕಂಕನಾಡಿ ಬಳಿ ನೆಲೆಸಿದ್ದರು. ಅಲ್ಲಿನ ಶಾಲೆಯೊಂದರಲ್ಲಿ ಕೆಲವು ಸಮಯ ವಿದ್ಯಾಭ್ಯಾಸ ಮಾಡಿದ್ದರು. ಬಾಲ್ಯದಲ್ಲಿಯೇ ಸಿನೆಮಾಸಕ್ತಿ ಹೊಂದಿದ್ದ ಲೀಲಾವತಿ ನಂತರ ಮೈಸೂರಿಗೆ ತೆರಳಿ ಹಂತಹಂತವಾಗಿ ಕಲಾ ಬದುಕು ಕಟ್ಟಿಕೊಂಡಿದ್ದರು.
ಕಲಾವಿದೆಯಾಗಿ ತಾನು ಎಷ್ಟೇ ಎತ್ತರಕ್ಕೆ ಏರಿದ್ದರೂ ಅವರು ತನ್ನ ಮಾತೃ ಭಾಷೆ ತುಳುವನ್ನು ಮರೆತಿರಲಿಲ್ಲ. ಮಗ ವಿನೋದ್ ರಾಜ್ ಜೊತೆ ತುಳುವಿನಲ್ಲಿಯೇ ಮಾತನಾಡುತ್ತಿದ್ದರು. 8 ತುಳು ಸಿನೆಮಾಗಳಲ್ಲಿ ಅಭಿನಯಿಸಿ ತುಳು ಸಿನೆಮಾಕ್ಕೆ ಜನಪ್ರಿಯತೆ ತಂದಿದ್ದರು.
ಕರಾವಳಿಯ ಸಿನೆಮಾ, ನಾಟಕ ಮಂದಿ ಜೊತೆ ನಿಕಟ ಸಂಪರ್ಕಹೊಂದಿದ್ದ ಅವರು, ತುಳು ನಾಟಕ, ಸಿನೆಮಾಗಳ ಜೊತೆ ಕಲಾವಿದರನ್ನೂ ಕೂಡಾ ಪ್ರೋತ್ಸಾಹಿಸುತ್ತಿದ್ದರು.
ತುಳು ಭಾಷೆಯ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಅವರು ತುಳು ಭಾಷೆ ಉಳೀಬೇಕು, ಬೆಳೆಯಬೇಕು ಎಂಬ ಕಾಳಜಿ ಹೊಂದಿದ್ದರೆಂದು ಲೀಲಾವತಿ ಅವರ ನಿಕಟವರ್ತಿ ತಮ್ಮ ಲಕ್ಷ್ಮಣ ಸ್ಮರಿಸುತ್ತಾರೆ.
ತುಳುನಾಡಿನ ಸಿಗಡಿ ಚಟ್ನಿ, ಮೀನು ಲೀಲಾವತಿ ಅವರ ಇಷ್ಟದ ಖಾದ್ಯವಾಗಿತ್ತು.