ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಸಂಸದ ಡ್ಯಾನಿಶ್ ಅಲಿ (Danish Ali)ಅವರನ್ನು ಮಾಯಾವತಿ ತಮ್ಮ ಬಹುಜನ ಸಮಾಜ ಪಕ್ಷದಿಂದ (BSP)ಉಚ್ಛಾಟಿಸಿದ್ದಾರೆ.
“ಪಕ್ಷದ ನೀತಿಗಳು, ಸಿದ್ಧಾಂತ ಮತ್ತು ಶಿಸ್ತಿನ ವಿರುದ್ಧ ಹೇಳಿಕೆಗಳು ಅಥವಾ ಕ್ರಮಗಳ ವಿರುದ್ಧ ನಿಮಗೆ ಎಚ್ಚರಿಕೆ ನೀಡಲಾಗಿದೆ. ಆದರೆ, ನೀವು ನಿರಂತರವಾಗಿ ಪಕ್ಷದ ವಿರುದ್ಧ ವರ್ತಿಸುತ್ತಿದ್ದೀರಿ” ಎಂದು ಬಿಎಸ್ಪಿ ಹೇಳಿಕೆಯಲ್ಲಿ ತಿಳಿಸಿದೆ.
ಲೋಕಸಭೆಯಿಂದ ಉಚ್ಛಾಟಿಸಲಾಗಿರುವ ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ಅವರಿಗೆ ನ್ಯಾಯಕ್ಕಾಗಿ ಒತ್ತಾಯಿಸಿ ಅವರು ನಿನ್ನೆ ಸಂಸತ್ತಿನ ಹೊರಗೆ ಏಕವ್ಯಕ್ತಿ ಪ್ರತಿಭಟನೆ ನಡೆಸಿದ್ದರು ಅಲಿ. ಸಂತ್ರಸ್ತರನ್ನು ಅಪರಾಧಿಯನ್ನಾಗಿ ಮಾಡಬೇಡಿ ಎಂಬ ಫಲಕವನ್ನು ಕುತ್ತಿಗೆಗೆ ನೇತುಹಾಕಿ ಅವರು ಪ್ರತಿಭಟಿಸಿದ್ದರು.
ಜಾಮಿಯಾ ಮಿಲಿಯಾ ಇಸ್ಲಾಮಿಯಾ ಹಳೆಯ ವಿದ್ಯಾರ್ಥಿಯಾಗಿದ್ದ ಅಲಿ, ವಿದ್ಯಾರ್ಥಿ ದಿನಗಳಿಂದಲೂ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಕರ್ನಾಟಕದಲ್ಲಿ 2017 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ, ಜೆಡಿ (ಎಸ್) ಮತ್ತು ಕಾಂಗ್ರೆಸ್ ಚುನಾವಣೋತ್ತರ ಮೈತ್ರಿಯ ಹಿಂದಿನ ಪ್ರಮುಖ ಶಕ್ತಿ ಮತ್ತು ಮುಖವಾಗಿ ಅಲಿ ಅವರ ಹೆಸರು ಹೊರಹೊಮ್ಮಿತ್ತು. ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ, ಆ ಸಮಯದಲ್ಲಿ ಕೇವಲ 42 ವರ್ಷದ ಅಲಿ ಅವರನ್ನು ನಂಬಿ, ಎರಡು ಪಕ್ಷಗಳು ಸ್ಥಾಪಿಸಿದ ಐದು ಸದಸ್ಯರ ಒಕ್ಕೂಟದ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿಯ ಸಂಚಾಲಕರಾಗಿ ಹೆಸರಿಸಲಾಯಿತು.ಅದು ಅಲ್ಪಾವಧಿಯ ಜೆಡಿ(ಎಸ್)-ಕಾಂಗ್ರೆಸ್ ಸರ್ಕಾರ ಆಗಿತ್ತು.
2019 ರ ಲೋಕಸಭಾ ಚುನಾವಣೆಯಲ್ಲಿ, ಡ್ಯಾನಿಶ್ ಅಲಿ ಅವರು ತಮ್ಮ ಹುಟ್ಟೂರಾದ ಹಾಪುರ್‌ನಿಂದ ಬಹಳ ದೂರದಲ್ಲಿರುವ ಯುಪಿಯ ಅಮ್ರೋಹಾದಿಂದ ಬಿಎಸ್‌ಪಿ ಟಿಕೆಟ್‌ನಲ್ಲಿ ನಿಂತರು. ಇದು ಅವರ ಮೊದಲ ಚುನಾವಣಾ ಸ್ಪರ್ಧೆಯಾಗಿದ್ದರೂ, ಮುಸ್ಲಿಮರ ಪ್ರಾಬಲ್ಯವಿರುವ ಕ್ಷೇತ್ರವಾದ ಅಮ್ರೋಹಾದಿಂದ ದೊಡ್ಡ ಗೆಲುವು ಸಾಧಿಸಿದ್ದರು.