ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರಿ ಶಾಲೆಗಳ ಮುಚ್ಚುವಿಕೆ ಅಥವಾ ವಿಲೀನಕ್ಕೆ ಸಂಬಂಧಿಸಿದ ಚರ್ಚೆ ವಿವಾದಾತ್ಮಕವಾಗಿರುವ ಸಂದರ್ಭದಲ್ಲಿ, ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟವಾದ ಹೇಳಿಕೆಯೊಂದನ್ನು ನೀಡಿದ್ದಾರೆ. ಒಂದೇ ಒಂದು ಮಗು ಇದ್ದರೂ ಸರ್ಕಾರ ಯಾವುದೇ ಶಾಲೆಯನ್ನು ಮುಚ್ಚುವುದಿಲ್ಲ ಹಾಗೂ ವಿಲೀನ ಮಾಡುವ ಅಧಿಕಾರವೂ ಇಲ್ಲ ಎಂದು ಅವರು ಪುನರುಚ್ಚಾರಿಸಿದ್ದಾರೆ.
ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು ಎಂದು ಮನವಿ ಮಾಡಿರುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, “ಶಾಲೆಗಳನ್ನು ವಿಲೀನ ಮಾಡುವ ಅಧಿಕಾರ ನಮ್ಮ ಬಳಿ ಇಲ್ಲ. ಸ್ವ-ಇಚ್ಚೆಯಿಂದ ಯಾರಾದರೂ ವಿಲೀನ ಮಾಡುವ ನಿರ್ಧಾರ ತೆಗೆದುಕೊಳ್ಳಬಹುದು, ಆದರೆ ಸರ್ಕಾರಿ ಹಸ್ತಕ್ಷೇಪ ಇಲ್ಲ. ಶಾಲೆಗಳಲ್ಲಿ ಟೀಚರ್, ಮಧ್ಯಾಹ್ನದ ಊಟ ಮತ್ತು ಶಿಕ್ಷಣ ವ್ಯವಸ್ಥೆ ನಿರಂತರವಾಗಿ ನಡೆಯಲಿದೆ” ಎಂದು ತಿಳಿಸಿದ್ದಾರೆ.
“KPS ಶಾಲೆಯನ್ನು ಯಾವುದೇ ಕಾರಣಕ್ಕಾಗಿ ನಿಲ್ಲಿಸಲು ಸಾಧ್ಯವಿಲ್ಲ. ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ನೀಡಲಾಗುವುದು. ಬೇರೆ ರಾಜ್ಯಗಳಲ್ಲಿ ವಿದ್ಯಾರ್ಥಿಗಳಿಗೆ ಅಥವಾ ಶಿಕ್ಷಕರಿಗೆ ನೀಡಲಾಗುವ ಅವಕಾಶಗಳನ್ನು ನೋಡಿಕೊಂಡು, ನಮ್ಮ ಶಾಲೆಗಳಲ್ಲಿ ಸಹ ಒಳ್ಳೆಯ ಬೆಳವಣಿಗೆ ಮಾಡಬಹುದು. ವಿಲೀನ ಮಾಡುವ ಅಭಿಪ್ರಾಯ ನಮ್ಮ ಪಾಲಿಗೆ ಅಸಂಬದ್ಧ” ಎಂದಿದ್ದಾರೆ.
ಬರಗೂರು ರಾಮಚಂದ್ರಪ್ಪ ಅವರ ಹೇಳಿಕೆ ಹಿಂದೆ ಕೆಲವರು ಪ್ರೇರಣೆ ನೀಡಿರುವುದು ಕಂಡುಬಂದಿದೆ. ನಾವು ಮಕ್ಕಳಿಗೆ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ನೀಡಲು ಗ್ಯಾರಂಟಿ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

