Tuesday, December 30, 2025

10 minutes ಡೆಲಿವರಿ ಬೇಡ! ಗಿಗ್ ಕಾರ್ಮಿಕರ ಪ್ರತಿಭಟನೆ: ಬೆಂಗಳೂರಿಗೆ ತಟ್ಟುತ್ತಾ ಮುಷ್ಕರದ ಬಿಸಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

10 ನಿಮಿಷಗಳಲ್ಲಿ ವಿತರಣೆ ಮಾಡುವ ಮಾದರಿಯನ್ನು ನಿಷೇಧಿಸಬೇಕು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಗಿಗ್ ಹಾಗೂ ಪ್ಲಾಟ್‌ಫಾರ್ಮ್ ಕಾರ್ಮಿಕ ಸಂಘಟನೆಗಳು ಡಿಸೆಂಬರ್ 31ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಕಳೆದ ಡಿಸೆಂಬರ್ 25ರಂದು ನಡೆದಿದ್ದ ಮುಷ್ಕರವು ದೆಹಲಿ ಮತ್ತು ಗುರುಗ್ರಾಮದಲ್ಲಿ ಅಡಚಣೆ ಉಂಟುಮಾಡಿದ್ದರೂ, ಬೆಂಗಳೂರಿನಲ್ಲಿ ಹೆಚ್ಚಿನ ಪರಿಣಾಮ ಕಂಡುಬಂದಿರಲಿಲ್ಲ. ಆದರೆ ಹೊಸ ವರ್ಷಕ್ಕೆ ಮುನ್ನ ನಡೆಯಲಿರುವ ಈ ಮುಷ್ಕರವು ಈ ಬಾರಿ ಬೃಹತ್ ಸ್ವರೂಪ ಪಡೆಯುವ ಸಾಧ್ಯತೆ ಇದೆ ಎಂದು ಸಂಘಟನೆಗಳು ಸೂಚಿಸಿವೆ.

ಈ ಕುರಿತು ಪ್ರತಿಕ್ರಿಯಿಸಿದ ಭಾರತೀಯ ಅಪ್ಲಿಕೇಶನ್ ಆಧಾರಿತ ಸಾರಿಗೆ ಕಾರ್ಮಿಕರ ಒಕ್ಕೂಟದ (IFAT) ಸಂಸ್ಥಾಪಕ ಹಾಗೂ ರಾಷ್ಟ್ರೀಯ ಅಧ್ಯಕ್ಷ ಪ್ರಶಾಂತ್ ಸವರ್ದೇಕರ್, ನಮ್ಮ ಒಕ್ಕೂಟಕ್ಕೆ ದೇಶದಾದ್ಯಂತ ಸುಮಾರು ಏಳು ಲಕ್ಷ ಯೂನಿಯನ್ ಸದಸ್ಯರಿದ್ದಾರೆ. ಇದರಲ್ಲಿ 35 ಸಾವಿರಕ್ಕೂ ಹೆಚ್ಚು ಸದಸ್ಯರು ಬೆಂಗಳೂರಿನವರಾಗಿದ್ದಾರೆ. ಮುಷ್ಕರದಲ್ಲಿ ಭಾಗವಹಿಸಲು ಯಾರ ಮೇಲೂ ಒತ್ತಡ ಇಲ್ಲ. ಕಾರ್ಮಿಕರು ಸ್ವ ಇಚ್ಛೆಯಿಂದಲೇ ಭಾಗವಹಿಸಬಹುದು. ಆದರೆ ಹಲವರು ಕಂಪನಿಗಳ ಭಯದಿಂದ ಪ್ರತಿಭಟನೆಗೆ ಬರಲು ಹಿಂಜರಿಯುತ್ತಿದ್ದಾರೆ ಎಂದು ಹೇಳಿದರು.

ಪ್ಲಾಟ್‌ಫಾರ್ಮ್ ಕಂಪನಿಗಳನ್ನು ಕಾರ್ಮಿಕ ಕಾನೂನುಗಳ ಅಡಿಯಲ್ಲಿ ನಿಯಂತ್ರಿಸಬೇಕು, 10 ನಿಮಿಷಗಳ ಡೆಲಿವರಿ ವ್ಯವಸ್ಥೆ ರದ್ದುಪಡಿಸಬೇಕು, ಅನಿಯಂತ್ರಿತ ಐಡಿ ಬ್ಲಾಕ್ ಮತ್ತು ದಂಡಗಳಿಗೆ ಕೊನೆ ಹಾಕಬೇಕು, ಪಾರದರ್ಶಕ ಹಾಗೂ ನ್ಯಾಯಯುತ ವೇತನ ಮತ್ತು ಉತ್ತಮ ಸಾಮಾಜಿಕ ಭದ್ರತೆ ಒದಗಿಸಬೇಕು ಎಂಬುದು ಪ್ರಮುಖ ಬೇಡಿಕೆಗಳಾಗಿವೆ. ಈ ಕುರಿತು ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ಹಲವು ಸಂಘಟನೆಗಳು ಪತ್ರ ಬರೆದಿವೆ.

ಮುಷ್ಕರಕ್ಕೆ ವ್ಯಾಪಕ ಬೆಂಬಲ ಸಿಕ್ಕಲ್ಲಿ ಡಿಸೆಂಬರ್ 31ರಂದು ಆಹಾರ ವಿತರಣೆಗೆ ತೊಂದರೆ ಉಂಟಾಗಬಹುದು ಎಂಬ ಆತಂಕ ಹೋಟೆಲ್ ಉದ್ಯಮದಲ್ಲಿದೆ. ಕೆಲವು ಸಣ್ಣ ಹೋಟೆಲ್‌ಗಳು ನೇರ ಕರೆಗಳ ಮೂಲಕ ಆರ್ಡರ್ ಪಡೆದು ಸ್ವಂತ ಸಿಬ್ಬಂದಿಯಿಂದ ವಿತರಣೆ ಮಾಡಲು ಯೋಚಿಸುತ್ತಿವೆ. ಆದರೆ ದೊಡ್ಡ ರೆಸ್ಟೋರೆಂಟ್‌ಗಳಿಗೆ ಪರ್ಯಾಯ ವ್ಯವಸ್ಥೆ ರೂಪಿಸುವುದು ಕಷ್ಟಕರವಾಗಿದೆ.

error: Content is protected !!