ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ ಡಿ.17ರ ವರೆಗೆ ಮೂಡುಬಿದಿರೆಯ ಪುತ್ತಿಗೆ ಗ್ರಾಮದ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಆಳ್ವಾಸ್ ವಿರಾಸತ್ ಹಲವು ವಿಶೇಷತೆಗಳಿಂದ ಗಮನ ಸೆಳೆಯಲಿದೆ.
ಈ ಬಾರಿಯ ಸಾಂಸ್ಕೃತಿಕ ಮೆರವಣಿಗೆಗೆ 100ಕ್ಕೂ ಹೆಚ್ಚು ಜಾನಪದ ತಂಡಗಳ ೫ ಸಾವಿರಕ್ಕೂ ಹೆಚ್ಚು ಕಲಾವಿದರು ಮೆರುಗು ನೀಡಲಿದ್ದಾರೆ.
ವಿದ್ಯಾಗಿರಿ ಆವರಣದ ತುಂಬಾ ಸುಮಾರು ಸಾವಿರಕ್ಕೂ ಅಧಿಕ ಕಲಾಕೃತಿಗಳು ಎಲ್ಲರನ್ನೂ ಕೈ ಬೀಸಿ ಕರೆಯುತ್ತಿವೆ. ವೀರಪುರುಷರು, ಪ್ರಾಣಿ-ಪಕ್ಷಿಗಳು, ಸಾಂಸ್ಕೃತಿಕ ನಾಯಕರು, ದೈವ-ದೇವರು, ಸ್ವಾತಂತ್ರ್ಯ ಹೋರಾಟಗಾರರು, ಪುಟಾಣಿಗಳ ನೆಚ್ಚಿನ ಕಾರ್ಟೂನ್ ಪಾತ್ರಗಳು, ತಾಯಿಯ ಮಮತೆ, ಬುದ್ಧನ ಧ್ಯಾನ, ನಗಿಸುವ ಮೋಟು… ಎಲ್ಲಾ ಕಲಾಕೃತಿಗಳೂ ಮನ ಸೆಳೆಯುತ್ತವೆ. ಮುಂದೆ ಹೆಜ್ಜೆ ಹಾಕಿದಂತೆ ಆನೆ, ಜಿರಾಫೆ, ಎತ್ತು, ಮಹಿಷಾಸುರ, ಯಕ್ಷಗಾನ, ಎತ್ತಿನ ಬಂಡಿ, ಚಕ್ರ, ಗಣಪತಿ, ಸಂಗೊಳ್ಳಿ ರಾಯಣ್ಣ, ಡೊಳ್ಳು ಕುಣಿತ, ಅಂಬೇಡ್ಕರ್, ವೀರಗಾಸೆ, ಹನುಮಂತ, ಕೋಟಿ ಚೆನ್ನಯ, ಲಕ್ಷ್ಮಿ ನರಸಿಂಹ, ವೀರಭದ್ರ , ಬಾಹುಬಲಿ, ವಿವೇಕಾನಂದ, ಬುದ್ಧ, ಗಾಂಧೀಜಿ, ಸಂಗೊಳ್ಳಿ ರಾಯಣ್ಣ, ಬಸವೇಶ್ವರ, ಆದಿಯೋಗಿ ಶಿವ, ಮೀರಾಬಾಯಿ, ಕಥಕ್ಕಳಿ ಪ್ರತಿಮೆಗಳನ್ನು ಕಾಣಬಹುದು.
ಕಾರ್ಟೂನ್ ಪಾತ್ರಧಾರಿಗಳಾದ ಚೋಟಾ ಭೀಮ್, ಚುಟ್ಕಿ, ರಾಜು, ಕಾಲಿಯಾ, ಡೊನಾಲ್ಡ್, ಡಕ್, ಮಿಕಿ, ಜಗ್ಗು ,ಮಿನ್ನಿ ಮೌಸ್, ಇಂದುಮತಿ, ಡೋಲು ಬೋಲು ಪುಟಾಣಿಗಳಿಗೆ ಪುಳಕ ನೀಡಲಿದ್ದಾರೆ.
ವರ್ಣರಂಜಿತ ಮೀನುಗಳ ಆಕೃತಿ, ಭಾರತಾಂಬೆ, ವಿವಿಧ ಸಂಸ್ಕೃತಿಯ ಪುರುಷ -ಮಹಿಳೆಯರು, ಬಿದಿರು ಗೊಂಬೆಗಳಿವೆ. ಕೃಷ್ಣ, ಕುಸ್ತಿಪಟು, ಬಕ, ನವಿಲು, ಕೋಳಿ, ಹುಂಜ, ಫ್ಲೆಮಿಂಗೋ ಪಕ್ಷಿ, ಹದ್ದು, ಸರ್ಪ, ನಂದಿಗಳಿವೆ. ವೀರಭದ್ರ, ಗೊರವಜ್ಜ, ಕಿನ್ನಾಳ ಕಲೆ, ಗೊಂಬೆಗಳು ಇತ್ಯಾದಿಗಳು ಮನೋಲ್ಲಾಸ ನೀಡುತ್ತವೆ. ಈ ಕಲಾಕೃತಿಗಳನ್ನು ಮರ, ಲೋಹ, ಸಿಮೆಂಟ್, ರಬ್ಬರ್ ಇತ್ಯಾದಿಗಳಿಂದ ರಚಿಸಲಾಗಿದೆ. ಪ್ರಮುಖ ವೇದಿಕೆಯ, ರಸ್ತೆ ಬದಿಯಲ್ಲೂ ಸಾಲಾಗಿ ನಿಂತ ಗೊಂಬೆಗಳು ಮುದ ನೀಡುತ್ತವೆ.
ನೀವಿನ್ನೂ ಹೊರಟಿಲ್ಲವಾ? ಬೇಗ ಬೇಗ ಹೊರಡಿ!