Tuesday, December 30, 2025

ಪುಟಿನ್ ನಿವಾಸದ ಮೇಲೆ ಉಕ್ರೇನ್ ದಾಳಿ: ಕಳವಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಅಧಿಕೃತ ನಿವಾಸದ ಮೇಲೆ ಉಕ್ರೇನ್ ದಾಳಿ ನಡೆಸಿದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ರಷ್ಯಾ–ಉಕ್ರೇನ್ ಯುದ್ಧವನ್ನು ಅಂತ್ಯಗೊಳಿಸಲು ನಡೆಯುತ್ತಿರುವ ರಾಜತಾಂತ್ರಿಕ ಪ್ರಯತ್ನಗಳೇ ಶಾಶ್ವತ ಶಾಂತಿಗೆ ಏಕೈಕ ಮಾರ್ಗ ಎಂದು ಅವರು ಪುನರುಚ್ಚಾರ ಮಾಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಅಧ್ಯಕ್ಷರ ನಿವಾಸವನ್ನು ಗುರಿಯಾಗಿಸಿರುವ ಘಟನೆಗಳು ಆತಂಕಕಾರಿಯಾಗಿದೆ ಎಂದು ತಿಳಿಸಿದ್ದಾರೆ. ಇಂತಹ ದಾಳಿಗಳು ಶಾಂತಿ ಸ್ಥಾಪನೆಗೆ ನಡೆಯುತ್ತಿರುವ ಸಂವಾದದ ಪ್ರಯತ್ನಗಳನ್ನು ದುರ್ಬಲಗೊಳಿಸಬಹುದು ಎಂದು ಎಚ್ಚರಿಕೆ ನೀಡಿರುವ ಅವರು, ಸಂಘರ್ಷದಲ್ಲಿರುವ ಎಲ್ಲ ಪಕ್ಷಗಳು ಹಿಂಸೆಯನ್ನು ದೂರವಿಟ್ಟು ರಾಜತಾಂತ್ರಿಕ ಮಾರ್ಗದಲ್ಲೇ ಸಮಸ್ಯೆ ಬಗೆಹರಿಸಬೇಕೆಂದು ಮನವಿ ಮಾಡಿದ್ದಾರೆ.

ಫೆಬ್ರವರಿ 2022ರಲ್ಲಿ ಯುದ್ಧ ಆರಂಭವಾದಾಗಿನಿಂದಲೇ ಭಾರತ ಸಮತೋಲನದ ನಿಲುವು ಹೊಂದಿದ್ದು, ಸಂವಾದ ಮತ್ತು ಶಾಂತಿಯ ಮಾರ್ಗವನ್ನು ಬೆಂಬಲಿಸುತ್ತಿದೆ. ಪ್ರಧಾನಿ ಮೋದಿ ಹಲವು ಬಾರಿ ರಷ್ಯಾ ಹಾಗೂ ಉಕ್ರೇನ್ ನಾಯಕರೊಂದಿಗೆ ಮಾತನಾಡಿ, ಯುದ್ಧ ವಿರಾಮ ಮತ್ತು ಮಾತುಕತೆಗಳ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ.

error: Content is protected !!