ಹೊಸದಿಗಂತ ವರದಿ,ನಾಗಮಂಗಲ :
ಹೆಲ್ಮೆಟ್ ಧರಿಸಿ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗ್ರಾಮದ ಹೊರವಲಯದಲ್ಲಿ ಜಾನುವಾರು ಮೇಯಿಸುತ್ತಿದ್ದ ಇಬ್ಬರ ಮಹಿಳೆಯರ ಒಟ್ಟು 2.25ಲಕ್ಷ ರು. ಮೌಲ್ಯದ 45 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಸಿದು ಪರಾರಿಯಾಗಿರುವ ಘಟನೆ ತಾಲೂಕಿನ ಹೊಣಕೆರೆ ಹೋಬಳಿಯ ಮಣ್ಣಹಳ್ಳಿ ಮತ್ತು ಟಿ.ಚನ್ನಾಪುರ ದಾಖ್ಲೆ ಪಡೀಗೌಡನಕೊಪ್ಪಲು ಗ್ರಾಮದಲ್ಲಿ ಮಧ್ಯಾಹ್ನ ಸಂಭವಿಸಿದೆ.
ಮಣ್ಣಹಳ್ಳಿ ಗ್ರಾಮದ ಶಿವಣ್ಣ ಅವರ ಪತ್ನಿ ರಾಧಾ ಮತ್ತು ಪಡೀಗೌಡನಕೊಪ್ಪಲು ಗ್ರಾಮದ ನಾರಾಯಣಪ್ಪನ ಪತ್ನಿ ಕೆಂಪಮ್ಮ ಎಂಬುವರೇ ಚಿನ್ನದ ಮಾಂಗಲ್ಯ ಸರ ಕಳೆದುಕೊಂಡಿರುವ ಮಹಿಳೆಯರು.
ಮಧ್ಯಾಹ್ನ 4 ಗಂಟೆ ಸಮಯದಲ್ಲಿ ಟಿ.ಚನ್ನಾಪುರ ಗ್ರಾಮದ ಕೆಂಪಮ್ಮ ಎಂಬುವರು ಗ್ರಾಮದ ಹೊರವಲಯದಲ್ಲಿರುವ ಸರ್ಕಾರಿ ಪ್ರೌಢಶಾಲೆ ಸಮೀಪ ಎಮ್ಮೆ ಮೇಯಿಸುತ್ತಿದ್ದರು. ಈ ವೇಳೆ ಹೆಲ್ಮೆಟ್ ಧರಿಸಿ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕೆಂಪಮ್ಮ ಅವರ ಕುತ್ತಿಗೆಯಲ್ಲಿದ್ದ 40 ಗ್ರಾಂ ತೂಕದ ಮಾಂಗಲ್ಯ ಸರಕ್ಕೆ ಕೈಹಾಕಿದ್ದಾರೆ. ಗಾಬರಿಗೊಂಡು ಚೀರಾಡಿದ ಕೆಂಪಮ್ಮ ಸರವನ್ನು ಬಿಗಿಯಾಗಿ ಹಿಡಿದುಕೊಂಡರಾದರೂ, ಅರ್ಧಭಾಗದಷ್ಟು ಮಾಂಗಲ್ಯ ಸರವನ್ನು ಸರಗಳ್ಳರು ಕಸಿದುಕೊಂಡು ಪರಾರಿಯಾಗಿದ್ದಾರೆ.
ಇದೇ ಆಸುಪಾಸಿನ ಸಮಯದಲ್ಲಿ ಮಣ್ಣಹಳ್ಳಿ ಗ್ರಾಮದ ರಾಧಾ ಎಂಬ ಮಹಿಳೆ ಜಮೀನಿನಿಂದ ಹುಲ್ಲಿನ ಹೊರೆ ಹೊತ್ತು ಮನೆಗೆ ಬರುತ್ತಿದ್ದ ವೇಳೆ ಬಸರಾಳು ಬ್ರಹ್ಮದೇವರಹಳ್ಳಿ ಮುಖ್ಯರಸ್ತೆಯಲ್ಲಿ ಹೆಲ್ಮೆಟ್ ಧರಿಸಿ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ರಾಧಾ ಅವರ ಬಾಯಿ ಮುಚ್ಚಿ ಕುತ್ತಿಗೆಯಲ್ಲಿದ್ದ 30 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಚೀರಾಟ ಕೇಳಿ ತಕ್ಷಣ ಎಚ್ಚೆತ್ತ ಗ್ರಾಮಸ್ಥರು ಸರಗಳ್ಳರನ್ನು ಹಿಂಬಾಲಿಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಇಬ್ಬರು ಮಹಿಳೆಯರು ಕಳೆದುಕೊಂಡಿರುವ ಚಿನ್ನದ ಸರಗಳ ಒಟ್ಟು ಮೌಲ್ಯ 2.25ಲಕ್ಷ ರು. ಎಂದು ಅಂದಾಜಿಸಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಮಣ್ಣಹಳ್ಳಿ ಮತ್ತು ಪಡೀಗೌಡನಕೊಪ್ಪಲು ಗ್ರಾಮಗಳಿಗೆ ಭೇಟಿ ಕೊಟ್ಟ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ರವಿಕುಮಾರ್ ನೇತೃತ್ವದ ಪೊಲೀಸರು ಪರಿಶೀಲನೆ ನಡೆಸಿ ಅಗತ್ಯ ಮಾಹಿತಿ ಪಡೆದುಕೊಂಡು ಸರಗಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ. ಚಿನ್ನದ ಮಾಂಗಲ್ಯ ಸರ ಕಳುವಾಗಿರುವ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಕೆಂಪಮ್ಮ ಮತ್ತು ರಾಧಾ ಪೋಷಕರು ತಿಳಿಸಿದ್ದಾರೆ.