ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಳ್ವಾಸ್ ವಿರಾಸತ್ ರಾಷ್ಟ್ರೀಯ ಸಾಂಸ್ಕೃತಿ ಉತ್ಸವ ಯುವ ಜನಾಂಗದಲ್ಲಿ ಸಾಧನೆಯ ಸಂಕಲ್ಪಕ್ಕೆ ಪ್ರೇರಣೆಯಾಗುವುದಲ್ಲದೆ ಸಮರ್ಪಣಾ ಮನೋಭಾವನೆ ಜಾಗೃತಿಗೊಳ್ಳಲು ಸಹಕಾರಿಯಾಗಿದೆ ಎಂದು ಕರ್ನಾಟಕದ ರಾಜ್ಯಪಾಲ ತಾವರ್ಚಂದ್ ಗೆಹ್ಲೋಟ್ ಹೇಳಿದರು.
ಮೂಡಬಿದಿರೆಯ ಪುತ್ತಿಗೆಯ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗ ಮಂದಿರದಲ್ಲಿ ಡಿ.೧೭ರವರೆಗೆ ಏರ್ಪಡಿಲಾಗಿರುವ ೨೯ನೇ ವರ್ಷದ ‘ಆಳ್ವಾಸ್ ವಿರಾಸತ್-೨೦೨೩’ ರಾಷ್ಟ್ರೀಯ ಸಾಂಸ್ಕೃತಿ ಉತ್ಸವವನ್ನು ಗುರುವಾರ ದೀಪ ಪ್ರಜ್ವಲನೆಗೈದು ಉದ್ಘಾಟಿಸಿದರು.
ಯುವಕರಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈಯುವ ಸಂಕಲ್ಪ ಮೂಡುತ್ತದೆ. ಆಳ್ವಾಸ್ ವಿರಾಸತ್ನಂತಹ ಕಾರ್ಯಕ್ರಮಗಳ ಮೂಲಕ ಅವರ ಬೆಳವಣಿಗೆ ಆಗುತ್ತದೆ. ಮಕ್ಕಳ ವೈಯಕ್ತಿಕ ಕುಟುಂಬದ ದೇಶಕ್ಕೆ ಸಮರ್ಪಣಾ ಮನೋಭಾವ ಬೇಕು, ಇದರೊಂದಿಗೆ ಅದು ಜಾಗೃತವಾಗುತ್ತದೆ.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಕಲಿತರೂ ಅವರ ಸರ್ವಾಂಗೀಣ ಬೆಳವಣಿಗೆ ಅಭೂತಪೂರ್ವವಾಗಿರುತ್ತದೆ. ಈ ನಿಟ್ಟಿನಲ್ಲಿ ಕನ್ನಡ ಮಾಧ್ಯಮ ಶಿಕ್ಷಣ ನಿಶ್ಚಿತವಾಗಿ ವಿದ್ಯಾರ್ಥಿಗಳಿಗೆ ಇದು ಅನುಕೂಲಕರವಾಗಲಿದೆ. ನಮ್ಮ ಮಾತೃ ಭಾಷೆಯಲ್ಲಿ ಕಲಿತರೂ ದೇಶಕ್ಕೆ ಅಪಾರವಾದ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ಜರ್ಮನಿ, ಜಪಾನ್, ಫ್ರಾನ್ಸ್ ಮುಂತಾದ ದೇಶಗಳ ಜನರು ತಮ್ಮ ಮಾತೃಭಾಷೆಯಲ್ಲೇ ಶಿಕ್ಷಣವನ್ನು ಪಡೆಯುತ್ತಾರೆ. ವಿಶ್ವದಲ್ಲಿ ಇಂತಹ ರಾಷ್ಟ್ರಗಳ ಜನರ ಸಾಧನೆ ಶ್ರೇಷ್ಠವಾಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ನಾನು ಇದೀಗ ಎರಡನೇ ಬಾರಿಗೆ ಆಳ್ವಾಸ್ ವಿರಾಸತ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ಇಂತಹ ಸುಂದರವಾದ ಆಳ್ವಾಸ್ ವಿರಾಸತ್ ಕಾರ್ಯಕ್ರಮವನ್ನು ಉದ್ಘಾಟಿಸಲು ಬಹಳಷ್ಟು ಖುಷಿಯಾಗುತ್ತಿದೆಯಲ್ಲದೆ ಇದು ಗೌರವದ ಸಂಕೇತವೂ ಆಗಿದೆ ಎಂದು ಗೆಹ್ಲೋಟ್ ನುಡಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಕೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಡಾ.ಮೋಹನ್ ಆಳ್ವ ಅವರು ದೊಡ್ಡ ಯಾಗವನ್ನೇ ಮಾಡುತ್ತಿದ್ದಾರೆ. ಆಳ್ವಾಸ್ ವಿರಾಸತ್ ಒಂದು ಜಾತ್ರೆಯಲ್ಲ. ಅದು ಜ್ಞಾನ ಜಾತ್ರೆ ಮತ್ತು ಜ್ಞಾನ ಯಾತ್ರೆ. ಮುಂದಿನ ಜನಾಂಗಕ್ಕೆ ಸಂಸ್ಕಾರ, ಸಂಸ್ಕೃತಿಯನ್ನು ನೀಡುವಂತಹ ಮಹತ್ಕಾರ್ಯವಿದು. ಶಿಕ್ಷಣವಿಲ್ಲದೆ ಜ್ಞಾನ ಬೆಳೆಯುವುದಿಲ್ಲ, ವಿಜ್ಞಾನ ಬೆಳೆಯುವುದಿಲ್ಲ. ಇದು ಬೆಳೆಯಬೇಕಾದರೆ ಸಂಸ್ಕೃತಿ, ಸಂಸ್ಕಾರದ ಅಗತ್ಯವಿದೆ ಎಂದರು.
ಕ್ಯಾ.ಎಂ.ವಿ. ಪ್ರಾಂಜಲ್ರಿಗೆ ಅರ್ಪಣೆ
೨೯ನೇ ವರ್ಷದ ಆಳ್ವಾಸ್ ವಿರಾಸತ್ ರಾಷ್ಟ್ರೀಯ ಸಾಂಸ್ಕೃತಿ ಉತ್ಸವವನ್ನು ದೇಶಕ್ಕಾಗಿ ದೇಹತ್ಯಾಗ ಮಾಡಿದ ವೀರಯೋಧ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರಿಗೆ ಅರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಉಮಾನಾಥ ಎ. ಕೋಟ್ಯಾನ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಮಾಜಿ ಸಚಿವ ಅಭಯಚಂದ್ರ ಜೈನ್, ಭಾರತ ಸ್ಕೌಟ್ ಗೈಡ್ಸ್ ರಾಜ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಲ್. ಶಂಕರ್, ಎಂಜಿಆರ್ ಗ್ರೂಪ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಅದಾನಿ ಗ್ರೂಪ್ ಕಾರ್ಯ ನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಉದ್ಯಮಿಗಳಾದ ಶಶಿಧರ ಶೆಟ್ಟಿ ಬರೋಡ, ಪ್ರಸನ್ನ ಶೆಟ್ಟಿ ಬೆಂಗಳೂರು, ರವೀಂದ್ರನಾಥ ಆಳ್ವ ಮಂಗಳೂರು, ರವಿಶಂಕರ್ ಶೆಟ್ಟಿ ಬಂಟ್ವಾಳ, ಮುಸ್ತಫಾ ಎಸ್.ಎಂ., ಪ್ರವೀಣ್ ಕುಮಾರ್, ಕೆ. ಶ್ರೀಪತಿ ಭಟ್ ಮೂಡುಬಿದಿರೆ, ಪ್ರಮುಖರಾದ ಜಯಶ್ರೀ ಅಮರನಾಥ ಶೆಟ್ಟಿ ಮೂಡುಬಿದಿರೆ ಅತಿಥಿಗಳಾಗಿ ಭಾಗವಹಿಸಿದ್ದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ, ವಿರಾಸತ್ನ ರೂವಾರಿ ಡಾ.ಎಂ. ಮೋಹನ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪನ್ಯಾಸಕ ರಾಜೇಶ್ ಡಿ’ಸೋಜಾ ಕಾರ್ಯಕ್ರಮ ನಿರ್ವಹಿಸಿದರು.