ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಜನತೆಗೆ ಹೊಸ ವರ್ಷ ಸಮಯದಲ್ಲಿ ನಂದಿನಿ ಹಾಲು, ಮೊಸರು (Nandini Milk, Curd) ದರ ಹೆಚ್ಚಳದ ಬರೆ ಬೀಳಲಿದೆ.
ಈ ಸಂಬಂಧ ಅಧಿವೇಶನದಲ್ಲಿ (Belagavi Session) ಸರ್ಕಾರ ದರ ಏರಿಸುವ ಸುಳಿವು ನೀಡಿದೆ. ಹಾಲಿನ ದರ ಏರಿಕೆ ಪ್ರಸ್ತಾಪ ಪರಿಶೀಲನೆಯಲ್ಲಿದೆ ಎಂದು ಸರ್ಕಾರ (Karnataka Government) ಹೇಳಿದೆ.
ದರ ಹೆಚ್ಚಳ ಕುರಿತು ಮಾಲೂರು ಶಾಸಕ ಕೆ ವೈ ನಂಜೇಗೌಡ ಪ್ರಶ್ನೆಗೆ ಪಶು ಸಂಗೋಪನೆ ಖಾತೆ ಸಚಿವ ಕೆ ವೆಂಕಟೇಶ್ ಉತ್ತರ ನೀಡಿದ್ದಾರೆ. ಇತರೇ ಖಾಸಗಿ ಬ್ರ್ಯಾಂಡ್‌ಗಳ ದರಕ್ಕಿಂತ ನಂದಿನಿ ಬ್ರ್ಯಾಂಡ್‌ಗಳ ದರ 10-12 ರೂ. ಕಡಿಮೆ ಇದೆ. ಹಾಲು ಉತ್ಪಾದಕರು, ಒಕ್ಕೂಟಗಳು ನಷ್ಟದಲ್ಲಿದ್ದು, ಗ್ರಾಹಕರಿಗೆ ಹೊರೆಯಾಗದಂತೆ ದರ ಹೆಚ್ಚಿಸುವುದಾಗಿ ಉತ್ತರ ಕೊಟ್ಟಿದ್ದಾರೆ.
ಒಂದು ವೇಳೆ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಂಡರೆ ನಾಲ್ಕೇ ತಿಂಗಳ ಒಳಗಡೆ ಮತ್ತೊಮ್ಮೆ ಹಾಲಿನ ದರ ಏರಿಕೆಯಾಗಲಿದೆ.
ಕಳೆದ ಆಗಸ್ಟ್ 1ರಿಂದ ಹಾಲಿನ ದರದಲ್ಲಿ 3 ರೂ.ಗಳಷ್ಟು ಹೆಚ್ಚಳ ಮಾಡಲಾಗಿತ್ತು. ಮೊಸರಿನ ದರ ಸೇರಿದಂತೆ ಇನ್ನಿತರ ಉತ್ಪನ್ನಗಳ ದರವನ್ನು ಏರಿಸಲಾಗಿತ್ತು. ಮತ್ತೆ ನಾಲ್ಕೇ ತಿಂಗಳಲ್ಲಿ ಮತ್ತೊಂದು ದರ ಹೆಚ್ಚಳ ಶಾಕ್ ಕೊಡಲು ಸರ್ಕಾರ ಮುಂದಾಗಿದೆ. ಮತ್ತೆ ನಂದಿನಿ ಹಾಲಿನ ದರ ಏರಿಕೆ ಮಾಡುವ ಬಗ್ಗೆ ಕೆಎಂಎಫ್ (KMF) ಚಿಂತನೆ ನಡೆಸಿದೆ.