ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ ದೇವಸ್ಥಾನದ (Mathura’s Krishna Janmabhoomi Land Dispute) ಪಕ್ಕದಲ್ಲಿರುವ ಶಾಹಿ ಈದ್ಗಾ (Shahi Idgah) ಸಂಕೀರ್ಣದ ಪ್ರಾಥಮಿಕ ಸಮೀಕ್ಷೆಗೆ ಅನುಮತಿ ನೀಡಿದ ಅಲಹಾಬಾದ್ ಹೈಕೋರ್ಟ್ ಗುರುವಾರ ನೀಡಿದ ಆದೇಶಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್ (Supreme Court) ಶುಕ್ರವಾರ ನಿರಾಕರಿಸಿದೆ.
ಇದು ಕಾನೂನುಬಾಹಿರ ಮತ್ತು ಅನಿಯಂತ್ರಿತ ಎಂದು ಆರೋಪಿಸಿ ಈದ್ಗಾ ಮಸೀದಿ ಸಮಿತಿಯು ಹೈಕೋರ್ಟ್ನ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.
ವಿವಾದಕ್ಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ಅಲಹಾಬಾದ್ ಹೈಕೋರ್ಟ್ಗೆ ವರ್ಗಾಯಿಸುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಈಗಾಗಲೇ ತಮ್ಮ ಅರ್ಜಿಯನ್ನು ಸ್ವೀಕರಿಸಿದೆ ಎಂದು ಮಸೀದಿ ಸಮಿತಿಯ ವಕೀಲ ಹುಝೆಫಾ ಅಹ್ಮದಿ ವಾದಿಸಿದರು. ಆದರೆ, ಈ ಅರ್ಜಿಯ ಬಗ್ಗೆ ಲಿಖಿತ ವಾದವನ್ನು ಸುಪ್ರೀಂ ಕೋರ್ಟ್ ಕೇಳಿದೆ ಮತ್ತು ವಿವರವಾದ ವಿಚಾರಣೆಯ ಅಗತ್ಯವಿದೆ ಎಂದು ಹೇಳಿದೆ.
ಈ ಪ್ರಕರಣ ಇನ್ನೂ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇದೆ, ಆದರೆ ಹೈಕೋರ್ಟ್ ಸಮೀಕ್ಷೆಗೆ ಆದೇಶ ನೀಡಿದ್ದು, ಇದರಿಂದ ಪ್ರಕರಣದ ಫಲಿತಾಂಶಕ್ಕೆ ಧಕ್ಕೆಯಾಗುತ್ತದೆ ಎಂದು ಹುಝೆಫಾ ಅಹ್ಮದಿ ಹೇಳಿಕೊಂಡಿದ್ದಾರೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್ವಿಎನ್ ಭಟ್ ಅವರ ಪೀಠವು, ಈ ಪ್ರಕರಣಗಳ ವರ್ಗಾವಣೆ ವಿರುದ್ಧದ ಅರ್ಜಿಯನ್ನು ಜನವರಿ 9 ರಂದು ವಿಚಾರಣೆಗೆ ಪಟ್ಟಿ ಮಾಡಲಾಗಿದೆ ಎಂದು ತಿಳಿಸಿದೆ.ಮಸೀದಿ ಸಮಿತಿಯು ನಿನ್ನೆಯ ಹೈಕೋರ್ಟ್ನ ಆದೇಶವನ್ನು ಔಪಚಾರಿಕವಾಗಿ ಪ್ರಶ್ನಿಸಿಲ್ಲ. ಈ ಹಿನ್ನೆಲೆ ಅಂದೇ ವಿಚಾರಣೆ ನಡೆಸುತ್ತೇವೆ. ಈ ಹಂತದಲ್ಲಿ ಯಾವುದೇ ಮಧ್ಯಂತರ ಆದೇಶ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಡಿಸೆಂಬರ್ 18 ರಂದು ಸಮೀಕ್ಷೆಯ ರೂಪುರೇಷೆ ಅಂತಿಮಗೊಳಿಸುವ ಕುರಿತು ಹೈಕೋರ್ಟ್ ಆದೇಶವನ್ನು ನೀಡಲಿದೆ. ಈ ಹಿನ್ನೆಲೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕೆಂದು ಅಹ್ಮದಿ ಮನವಿ ಮಾಡಿದ್ದಾರೆ.ಮಸೀದಿ ಸಮಿತಿಯ ಹಕ್ಕುಗಳನ್ನು ರಕ್ಷಿಸಲು ಸುಪ್ರೀಂ ಕೋರ್ಟ್ನ ಮಧ್ಯಸ್ಥಿಕೆ ಅಗತ್ಯ ಎಂದೂ ಅವರು ಹೇಳಿದರು.
ಇದಕ್ಕೆ ಉತ್ತರಿಸಿದ ಸುಪ್ರೀಂ ಕೋರ್ಟ್ ಜನವರಿ 9 ರಂದು ವಿವಾದದ ವಿಚಾರಣೆ ನಡೆಸಲಿದೆ ಎಂದು ಮಸೀದಿ ಸಮಿತಿಯು ಹೈಕೋರ್ಟ್ಗೆ ತಿಳಿಸಬಹುದು ಎಂದು ಪೀಠ ಹೇಳಿದೆ. ಹಾಗೂ, ಮಸೀದಿ ಸಮಿತಿಯು ತನ್ನ ಇಂದಿನ ಅವಲೋಕನಗಳ ಬಗ್ಗೆ ಹೈಕೋರ್ಟ್ಗೆ ತಿಳಿಸಬಹುದು ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.