ಹೊಸದಿಗಂತ, ವರದಿ,ಕುಮಟಾ :
ಬೈಕ್ ಕಳ್ಳತನ ಮಾಡಿ ತಲೆಮಸಿಕೊಳ್ಳುತ್ತಿದ್ದ ಕುಖ್ಯಾತ ಬೈಕ್ ಕಳ್ಳನನ್ನು ಕುಮಟಾ ಪೊಲೀಸರು ಶುಕ್ರವಾರ ಬಂಧಿಸಿದ್ದು, ಆತನಿಂದ ಒಂದು ಲಕ್ಷ ರೂ. ಮೌಲ್ಯದ ಮೂರು ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿ ಶಿರಸಿ ಕಸ್ತೂರಬಾ ನಗರದ ಖಾಲಿದ್ ಶರೀಪ್ ಸಾಬ್ ಕನವಳ್ಳಿ ಎಂಬಾತ. ಬಂಧಿತ ಆರೋಪಿ ವಿರುದ್ಧ ಕುಮಟಾ, ಭಟ್ಕಳ, ಶಿರಸಿ ಸೇರಿದಂತೆ ಹಲವು ಕಡೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು. ಈತ ಬಸ್ ನಿಲ್ದಾಣ, ಹೊಟೇಲ್ ಎದುರುಗಡೆ ನಿಲ್ಲಿಸಿಟ್ಟ ಬೈಕಿನ ಕೀಲಿಯನ್ನ ಕ್ಷಣಾರ್ಧದಲ್ಲಿ ಒಡೆದು ಬೈಕ್ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ.
ಕುಮಟಾದ ಲುಕ್ಕೇರಿಯ ರಾಘವೇಂದ್ರ ಲಿಂಗಪ್ಪ ಗೌಡ ಇವರು ಕುಮಟಾ ವೈಭವ ಕಾಂಪ್ಲೆಕ್ಸ್ ಎದುರು ಬೈಕನ್ನು ನಿಲ್ಲಿಸಿಟ್ಟು ಬೇರೆಡೆ ತೆರಳಿದ ಸಂದರ್ಭದಲ್ಲಿ ಆರೋಪಿ ಬೈಕ್ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ. ಈ ಬಗ್ಗೆ ಕುಮಟಾದಲ್ಲಿ ಪ್ರಕರಣ ದಾಖಲಾಗಿ, ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ.
ಭಟ್ಕಳ ಡಿವೈಎಸ್ಪಿ ಶ್ರೀಕಾಂತ್ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ತಿಮ್ಮಪ್ಪ ನಾಯ್ಕ ಅವರ ನೇತೃತ್ವದಲ್ಲಿ ಕುಮಟಾ ಪಿಎಸ್ಐ ನವೀನ್ ನಾಯ್ಕ, ಸುನೀಲ್ ಬಂಡಿವಡ್ಡರ್ ಹಾಗೂ ಪದ್ಮಾ ಅವರ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ ಆರೋಪಿಯನ್ನ ಬಂಧಿಸಲಾಗಿದೆ.
ಈ ಕಾರ್ಯಚರಣೆಯಲ್ಲಿ ಗಣೇಶ ನಾಯಕ, ಗುರು ನಾಯಕ, ಪ್ರದೀಪ್ ನಾಯಕ, ಸಂತೋಷ್ ಚೆನ್ನಣ್ಣನವರ, ಮಾರುತಿ ಗಾಳಿಪೂಜಿ ಇವರುಗಳು ಭಾಗಿಯಾಗಿದ್ದರು. ಆರೋಪಿಯನ್ನು ಬಂಧಿಸುವಲ್ಲಿ ಕ್ಷಮಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಕಾರವಾರ ಎಸ್ಪಿ ಯವರು ಪ್ರಶಂಸೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.