KSRTC ಹೆಸರು ಬಳಕೆ ವಿವಾದ: ಕೇರಳದ ಅರ್ಜಿ ತಿರಸ್ಕರಿಸಿದ ಮದ್ರಾಸ್ ಹೈಕೋರ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ‘ಕೆಎಸ್‌ಆರ್‌ಟಿಸಿ’ ಸಂಕ್ಷೇಪಣಾ ಗುರುತು ಬಳಸಬಾರದು ಎಂದು ಕೇರಳ ರಾಜ್ಯ ಆರ್‌ಟಿಸಿ ಸಲ್ಲಿಸಿದ ಮನವಿಯನ್ನು ಮದ್ರಾಸ್‌ ಹೈಕೋರ್ಟ್‌ ವಜಾಗೊಳಿಸಿದೆ.

1973ರ ನವೆಂಬರ್​ 1ರಿಂದ ಕೆಎಸ್‌ಆರ್‌ಟಿಸಿ ಲೋಗೊ ಬಳಸುತ್ತಿರುವ ಬಗ್ಗೆ ದಾಖಲೆಗಳನ್ನು ಚೆನ್ನೈ ಟ್ರೇಡ್‌ ಮಾರ್ಕ್‌ ನೋಂದಣಿ ಅಧಿಕಾರಿಗೆ ಸಲ್ಲಿಸಿ 2013ರಲ್ಲಿ ಟ್ರೇಡ್‌ ಮಾರ್ಕ್‌ ಪ್ರಮಾಣ ಪತ್ರವನ್ನು ಪಡೆದಿತ್ತು. ಭಾರತ ಸರ್ಕಾರದ ರಿಜಿಸ್ಟ್ರಾರ್ ಆಫ್ ಕಾಪಿ ರೈಟ್ಸ್ ಅವರಿಂದ ‘KSRTC’ ಲೋಗೋ ಮತ್ತು ‘ಗಂಡಭೇರುಂಡ ಗುರುತು’ ಬಳಕೆಗಾಗಿ ಕಾಪಿ ರೈಟ್ ಸಹ ಪಡೆಯಲಾಗಿದೆ.

ಇದಾದ ನಂತರ, ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಚೆನ್ನೈನಲ್ಲಿರುವ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿಯ ಮುಂದೆ ಪ್ರಶ್ನಿಸಿದೆ. ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸಂಸ್ಥೆಯು 42 ವರ್ಷಗಳಿಂದ ಕೆಎಸ್‌ಆರ್​ಟಿಸಿ ಹೆಸರನ್ನು ಬಳಸುತ್ತಿರುವ ಬಗ್ಗೆ ತಿಳಿದಿದೆ. ಆದ್ದರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪಡೆದಿರುವ ಟ್ರೇಡ್ ಮಾರ್ಕ್ ನೋಂದಣಿ ಅಮಾನ್ಯವಾಗಿದೆ ಎಂದು ಅರ್ಜಿ ಸಲ್ಲಿಸಲು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅರ್ಹರಾಗಿರುವುದಿಲ್ಲ ಎಂದು ಕೆಎಸ್‌ಆರ್​ಟಿಸಿ ವಾದಿಸಿದೆ.

ಕೇರಳ ಸಾರಿಗೆ ಸಂಸ್ಥೆ ಕೂಡ 2019ರಲ್ಲಿ ನಮ್ಮ ರಾಜ್ಯದ ಕೆಎಸ್‌ಆರ್​ಟಿಸಿಗಿಂತಲೂ ಹಿಂದಿನಿಂದಲೇ ಆ ಸಂಕ್ಷಿಪ್ತ ಹೆಸರನ್ನು ಬಳಸುತ್ತಿರುವ ಕುರಿತು ನೋಂದಣಿ ಪಡೆದುಕೊಂಡಿದೆ. ಕೇಂದ್ರ ಸರ್ಕಾರವು ಐಪಿಎಬಿಯನ್ನು ರದ್ದುಗೊಳಿಸಿದ್ದು, ಐಪಿಎಬಿ ಮುಂದೆ ಬಾಕಿ ಉಳಿದಿದ್ದ ಪ್ರಕರಣಗಳನ್ನು ಚೆನ್ನೈನಲ್ಲಿರುವ ಮದ್ರಾಸ್ ಹೈಕೋರ್ಟ್​ಗೆ ವರ್ಗಾಯಿಸಲಾಯಿತು. ಈ ಪ್ರಕರಣ ಮಂಗಳವಾರ ಮದ್ರಾಸ್ ಹೈಕೋರ್ಟ್ ಮುಂದೆ ಬಂದಿದೆ.

ಅರ್ಜಿ ವಿಚಾರಣೆ ವೇಳೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಕೆ‌ಎಸ್​ಆರ್​ಟಿಸಿ ಹೆಸರು‌ ಬಳಕೆ ಮಾಡಲು ಯಾವುದೇ ಅಭ್ಯಂತರವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಮದ್ರಾಸ್ ಹೈಕೋರ್ಟ್ ಕೇರಳ ಆರ್.ಟಿ.ಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು.

ಕೇರಳ ಆರ್.ಟಿ.ಸಿ ಸಲ್ಲಿಸಿದ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿರುವ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ‌ (ಕೆಎಸ್​ಆರ್​ಟಿಸಿ) ಪ್ರಸಕ್ತ ಹಾಗೂ ಮುಂಬರುವ ದಿನಗಳಲ್ಲಿ ಸಹ ‘ಕೆಎಸ್‌ಆರ್​ಟಿಸಿ’ ಹೆಸರನ್ನು ಬಳಸಲು ಯಾವುದೇ ಕಾನೂನು ಅಡಚಣೆಯಿರುವುದಿಲ್ಲ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!