ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಸ್ಸಿನ ಸೀಸನ್ ವೆಚ್ಚವನ್ನು ಪಂಚಾಯತ್ ಭರಿಸುವುದರೊಂದಿಗೆ ಬಸ್ಸಿನ ರೂಟ್‌ಗಳು ಮತ್ತು ಸಮಯ ಕ್ರಮವನ್ನು ಪಂಚಾಯತ್‌ನ ಸಲಹೆಯಂತೆ ಕೆಎಸ್‌ಆರ್‌ಟಿಸಿ ಸರ್ವೀಸ್ ನಡೆಸುವ ಗ್ರಾಮಬಂಡಿ ಯಶಸ್ವಿಯಾಗಿ ಕುಂಬಳೆ ಗ್ರಾಮ ಪಂಚಾಯತ್‌ನಲ್ಲಿ ಸೇವೆಯನ್ನು ಸಲ್ಲಿಸುತ್ತಿದೆ.
೨೦೨೩-೨೪ ರ ಆರ್ಥಿಕ ವರ್ಷದ ಯೋಜನೆಯಲ್ಲಿ ಸೇರಿಸಿ ಕುಂಬಳೆ ಗ್ರಾಮ ಪಂಚಾಯತ್ ಮತ್ತು ಕೆಎಸ್‌ಆರ್‌ಟಿಸಿಯು ಜಂಟಿಯಾಗಿ ನಡೆಸುವ ಯೋಜನೆಯಾಗಿದೆ ಈ ಗ್ರಾಮಬಂಡಿ.
ಮೊದಲ ಗ್ರಾಮಬಂಡಿ
ಕಳೆದ ಅಕ್ಟೋಬರ್ ೬ರಂದು ಕೇರಳ ರಾಜ್ಯ ಸಾರಿಗೆ ಸಚಿವ ಆಂಟನಿ ರಾಜು ಅವರು ಕಾಸರ ಗೋಡು ಜಿಲ್ಲೆಯ ಮೊದಲ ಗ್ರಾಮಬಂಡಿ ಯೋಜನೆಗೆ ಕುಂಬಳೆ ಗ್ರಾಮ ಪಂಚಾಯತ್‌ನಲ್ಲಿ ಚಾಲನೆ ನೀಡಿದ್ದರು.
ಸೌಕರ್ಯವಿಲ್ಲದ ಪ್ರದೇಶದಲ್ಲೂ ಸೇವೆ
ಪ್ರಸ್ತುತ ಕುಂಬಳೆ ಗ್ರಾಮ ಪಂಚಾಯತ್‌ನ ಬಸ್ ಸೌಕರ್ಯವಿಲ್ಲದ ಪ್ರದೇಶಗಳಲ್ಲಿ ಈ ಗ್ರಾಮಬಂಡಿ ಸಂಚಾರ ನಡೆಸುವ ಮೂಲಕ ಉತ್ತಮ ಸೇವೆಯನ್ನು ನೀಡುತ್ತಿದೆ.
ಜನರಿಗೆ ಪ್ರಯೋಜನಕಾರಿ
ಗ್ರಾಮೀಣ ಪ್ರದೇಶದ ಜನಸಾಮಾನ್ಯ ರಿಗೂ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆಲ್ಲರಿಗೂ ಗ್ರಾಮಬಂಡಿ ಯೋಜನೆ ಬಂದ ಬಳಿಕ ಪ್ರಯಾ ಣದ ಸಮಸ್ಯೆ ನೀಗಿದಂತಾಗಿದೆ. ಪ್ರತಿ ದಿನ ನೂರಾರು ಜನರು ಗ್ರಾಮ ಬಂಡಿ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ.
ಜಿಲ್ಲೆಯ ಪ್ರಥಮ ಗ್ರಾಮ ಬಂಡಿಯನ್ನು ಯಶಸ್ವಿಯಾಗಿ ನಡೆಸುತ್ತಿರುವುದು ಹೆಚ್ಚಿನ ಸಂತಸ ತಂದಿದೆ ಎಂದು ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷೆ ತಾಹಿರಾ ಯೂಸುಫ್ ಹೇಳಿದರು.
ವಿದ್ಯಾರ್ಥಿಗಳಿಗೆ ರಿಯಾಯಿತಿ
ಪಂಚಾಯತ್ ವ್ಯಾಪ್ತಿಯ ಬಹುತೇಕ ವಾರ್ಡ್ ಗಳಲ್ಲಿ ಗ್ರಾಮಬಂಡಿ ಹಾದು ಹೋಗುತ್ತಿದೆ. ಶೀಘ್ರದಲ್ಲಿಯೇ ವಿದ್ಯಾರ್ಥಿಗಳ ರಿಯಾಯಿತಿ ಜಾರಿ ಗೊಳಿಸಲಾಗುವುದು. ಪಂಚಾಯತ್ ವ್ಯಾಪ್ತಿಯ ಪ್ರತಿಯೊಬ್ಬರಿಗೂ ಕೆಎಸ್‌ಆರ್‌ಟಿಸಿ ಸೇವೆ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.
ದಿನನಿತ್ಯ ಮೂರು ರೂಟ್‌ಗಳು
ಪ್ರತಿದಿನ ಮೂರು ರೂಟ್‌ಗಳ ಮೂಲಕ ಕುಂಬಳೆ ಪಂಚಾಯತ್‌ನ ಗ್ರಾಮಬಂಡಿಯು ಜನರಿಗೆ ಉತ್ತಮ ಸೇವೆ ನಡೆಸುತ್ತಿದೆ.
ಇವು ಗ್ರಾಮ ಬಂಡಿಯ.
ಸಂಚಾರ ಮಾರ್ಗಗಳು
ಪ್ರಸ್ತುತ ಕುಂಬಳೆ, ಆರಿಕ್ಕಾಡಿ, ಪಿ.ಕೆ. ನಗರ್, ಬಂಬ್ರಾಣ, ಚೂರಿತ್ತಡ್ಕ, ಕೋಡಿಯಮ್ಮೆ, ಪೂಕಟ್ಟೆ , ಬಾಯಿಕ್ಕಟ್ಟೆ, ಉಳುವಾರ, ಕಳತ್ತೂರು, ಪಾಂಬಾಡಿ, ಕಟ್ಟತ್ತಡ್ಕ, ನಾಯ್ಕಾಪು, ಮುಳಿಯಡ್ಕ, ಬದ್ರಿಯಾ ನಗರ್, ಪೇರಾಲ್ ಕಣ್ಣೂರು ಎಂಬ ಪ್ರದೇಶದಲ್ಲಿ ಗ್ರಾಮ ಬಂಡಿ ಸಂಚಾರ ನಡೆಸಲಾಗುತ್ತಿದೆ.
ವಿವಿಧೆಡೆ ಗ್ರಾಮಬಂಡಿ ಸೇವೆ ನೀಡಲು ಮನವಿ
ಕುಂಬಳೆ ಗ್ರಾಮ ಪಂಚಾಯತ್‌ನಲ್ಲಿ ಸ್ಥಳೀಯಾಡಳಿತ ಸಂಸ್ಥೆ, ಕೇರಳ ಸ್ಟೇಟ್ ಟ್ರಾನ್ಸ್ ಪೋರ್ಟ್ಸ್ ಕಾರ್ಪೊರೇಷನ್ ಜಂಟಿಯಾಗಿ ಗ್ರಾಮೀಣ ಪ್ರದೇಶಗಳ ಜನರ ಪ್ರಯಾಣ ಸಮಸ್ಯೆಯನ್ನು ಪರಿಹರಿಸುವ ಉದ್ದೇಶ ದಿಂದ ತಂದಿರುವ ಗ್ರಾಮಬಂಡಿ ಯೋಜನೆ ಯಶಸ್ವಿಯಾಗಿ ಅನುಷ್ಠಾನ ಗೊಂಡಿದ್ದು, ಜಿಲ್ಲೆಯ ಇತರ ಪಂಚಾಯತ್‌ಗಳು ಕೆಎಸ್ಸಾರ್ಟಿಸಿಯಲ್ಲಿ ಈ ಸೇವೆಗೆ ಮನವಿ ಮಾಡುತ್ತಿದ್ದಾರೆ.