ಹೊಸದಿಗಂತ ವರದಿ, ಕುಮಟಾ :
ಮನೆಯಲ್ಲಿದ್ದ ಅಡುಗೆ ಸಿಲೆಂಡರ್ ಸ್ಫೋಟಗೊಂಡು ಮನೆಗೆ ಬೆಂಕಿ ಹೊತ್ತಿಕೊಂಡು ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ತಾಲೂಕಿನ ಹೆಗಡೆ ಗ್ರಾಮದಲ್ಲಿ ನಡೆದಿದೆ.
ಹೆಗಡೆಯ ನಾರಾಯಣ ಮುಕ್ರಿ ಅವರ ಮನೆಯಲ್ಲಿ ಈ ಅಗ್ನಿ ಅವಘಡ ಸಂಬಂಧಿಸಿದ್ದು, ಸಿಲೆಂಡರ್ ಸೋರಿಕೆಯಿಂದಾಗಿ ಮನೆಯಲ್ಲಿದ್ದ ಎರಡು ಸಿಲೆಂಡರ್ ಸ್ಪೋಟಗೊಂಡಿದೆ. ಇವರದ್ದು ಹಂಚಿನ ಮನೆಯಾಗಿದ್ದ ಕಾರಣ ಬೆಂಕಿ ತಗುಲಿ ಸಂಪೂರ್ಣವಾಗಿ ಹಾನಿಯಾಗಿದೆ.
ಬೆಂಕಿ ತಗುಲಿರುವುದನ್ನು ನೋಡಿದ ಅಕ್ಕ ಪಕ್ಕದ ಮನೆಯವರು ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ ಸಾಧ್ಯವಾಗಿಲ್ಲ. ಮನೆಯ ಯಜಮಾನನಾದಿಯಾಗಿ ಮನೆಮಂದಿ ಕೂಲಿ ಕೆಲಸಕ್ಕೆ ತೆರಳಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಮನೆಯಲ್ಲಿದ್ದ ಬಟ್ಟೆ ಸೇರಿದಂತೆ ಎಲ್ಲಾ ವಸ್ತುಗಳು ಸುಟ್ಟುಕರಲಾಗಿದ್ದು, ಈ ಘಟನೆಯಿಂದಾಗಿ ನಾರಾಯಣ ಮುಕ್ರಿ ಅವರ ಕುಟುಂಬ ಸಂಕಷ್ಟ ಎದುರಿಸುವಂತಾಗಿದೆ.
ಘಟನೆಯ ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ವಿನೋದ ರಾವ್, ಪ್ರಭಾರಿ ತಹಶೀಲ್ದಾರ ಸತೀಶ ಗೌಡ, ಹೆಗಡೆ ಪಿಡಿಓ ಹಾಗೂ ಅರಣ್ಯ ಇಲಾಖೆ, ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದು ಎಲ್ಲಾ ಪ್ರಕ್ರಿಯೆ ಕೈಗೊಂಡರು.