ಹೊಸದಿಗಂತ ವರದಿ, ವಿಜಯಪುರ:
ಹೈಕೋರ್ಟ್ನಲ್ಲಿ ಡಿ.ಕೆ.ಶಿವಕುಮಾರ ಪ್ರಕರಣ ಜನವರಿ 5 ಕ್ಕೆ ಮತ್ತೆ ವಿಚಾರಣೆ ಪ್ರಾರಂಭವಾಗುತ್ತದೆ. ನ್ಯಾಯಕ್ಕೆ ಜಯ ಸಿಕ್ಕೆ ಸಿಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರದ ವಿರುದ್ಧ ನಾವಿದ್ದೇವೆ. ನಾಳೆ ಕೊಲೆ ಆರೋಪಿಯನ್ನು ಸರ್ಕಾರ ವಾಪಸ್ ತೆಗೆದುಕೊಳ್ತೀನಿ ಅಂದರೆ ಅರಾಜಕತೆ ಉಂಟಾಗುತ್ತದೆ. ಹೈಕೋರ್ಟ್ನಲ್ಲಿ ನಮ್ಮ ವಕೀಲರು ವಾದ ಮಂಡನೆ ಮಾಡಿದ್ದಾರೆ. ಸರ್ಕಾರದ ಪರವಾಗಿ ಅವರ ವಕೀಲರು ವಾದ ಮಂಡನೆ ಮಾಡ್ತಾರೆ ಎಂದರು.
ಮೈಸೂರು ವಿಮಾನ ನಿಲ್ದಾಣಕ್ಕೆ ಮೈಸೂರು ಮಹಾರಾಜರ ಹೆಸರು ಇಡಬೇಕು. ಮೈಸೂರು ಮಹಾರಾಜರ ದೂರ ದೃಷ್ಟಿಯಿಂದ ಮೈಸೂರು ಅಭಿವೃದ್ಧಿ ಆಗಿದೆ. ಏಷ್ಯಾದಲ್ಲಿ ಮೊದಲು ವಿದ್ಯುತ್ ಆಗಿದ್ದು ಜಯಚಾಮರಾಜೇಂದ್ರ ಒಡೆಯರ್ ಸಮಯದಲ್ಲಿ ಎಂದರು.
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಯಾಕೆ ಅಭಿವೃದ್ಧಿ ಆಗಲಿಲ್ಲ ಅನ್ನೋದರ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ. ಆದಿಲ್ಶಾಹಿ, ನಿಜಾಮ್ ಶಾಹಿಗಳಿಂದ ಈ ಭಾಗ ಅಭಿವೃದ್ಧಿ ಆಗಿಲ್ಲ ಎಂದರು.
ಅಲ್ಲದೇ, ಬಿಜೆಪಿ, ಹಿಂದೂ ಕಾರ್ಯಕರ್ತ ಮೇಲೆ ದೌರ್ಜನ್ಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ದೌರ್ಜನ್ಯಕ್ಕೆ ಒಳಗಾಗದ ಹಿಂದೂ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರ ನೆರವಿಗೆ ಬಿಜೆಪಿ ಇದೆ. ಬಿಜೆಪಿ ಕಾರ್ಯಕರ್ತರಿಗೆ ಕಾನೂನು ಹೋರಾಟಕ್ಕೆ ನೆರವು ನೀಡ್ತೇವೆ. ಕೆಲವೇ ದಿನಗಳಲ್ಲಿ ಬೆಂಗಳೂರಿನಲ್ಲಿ ಕಚೇರಿ ತೆರೆಯಲಾಗುತ್ತಿದೆ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಂಡರು, ಅವರನ್ನ ಸ್ಟೇಷನ್ಗೆ ಕರೆಯಿಸಿ ಮುಚ್ಚಳಿಕೆ ಪತ್ರ ಬರೆಯಿಸಿಕೊಳ್ಳುತ್ತಿದ್ದಾರೆ. ಈ ದೌರ್ಜನ್ಯ ನಾವು ಸಹಿಸೊಲ್ಲ. ಪ್ರಚೋದನೆ ಮಾಡಿದ್ದರೇ ಬೇಕಾದರೆ ಕ್ರಮ ಕೈಗೊಳ್ಳಲಿ. ವಾಕ್ ಸ್ವಾತಂತ್ರ್ಯ ಇದೆ. ಅಭಿವ್ಯಕ್ತಿ ಸ್ವಾತಂತ್ರ್ಯ ತಡೆಯುವ ಅವಕಾಶ ಇಲ್ಲ. ವಿನಾಕಾರಣ ದೌರ್ಜನ್ಯ ಸರಿ ಅಲ್ಲ. ಬಿಜೆಪಿ ಕಾರ್ಯಕರ್ತರ, ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಆದರೆ, ದೌರ್ಜನ್ಯವಾದರೆ ಕಾನೂನು ನೆರವಿಗೆ ಮುಂದಾಗುತ್ತೇವೆ ಎಂದರು.
2 ತಿಂಗಳಲ್ಲಿ ಕಚೇರಿ ಮಾಡುತ್ತೇವೆ, ಉಚಿತ ಕಾಲಿಂಗ್ ಸೇವೆಯನ್ನು ನೀಡಲಿದ್ದೇವೆ. ಸಾಕಷ್ಟು ವಕೀಲರು ನೆರವು ನೀಡಲು ಮುಂದೆ ಬಂದಿದ್ದಾರೆ. ಭಯ ಭೀತರಾಗಿದ್ದಾರೆ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತೇವೆ ಎಂದರು.