ಸುಸ್ಥಿರ ಅಭಿವೃದ್ಧಿ ಗುರಿಗಳ ಮುಟ್ಟಲು ಎಲ್ಲ ಸ್ತರಗಳಲ್ಲೂ ದೀರ್ಘಕಾಲದ ಸಹಯೋಗಗಳು ಅಗತ್ಯ: ಡಾ. ಹರೀಶ್ ಹಂದೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

2030ರ ಹೊತ್ತಿಗೆ ಸಾಧಿಸಬೇಕಾದ ಸುಸ್ಥಿರ ಅಭಿವೃದ್ಧಿ ಗುರಿ (ಎಸ್ಡಿಜಿ)ಗಳನ್ನು ಮುಟ್ಟಲು ಎಲ್ಲ ಸ್ತರಗಳಲ್ಲೂ ದೀರ್ಘಕಾಲದ ದೊಡ್ಡ ಮಟ್ಟದ ಸಂಘಟನಾತ್ಮಕ ಸಹಯೋಗಗಳು ಅಗತ್ಯವಾಗಿದೆ ಎಂದು ಸೆಲ್ಕೋ ಫೌಂಡೇಷನ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಹರೀಶ್ ಹಂದೆ ಅಭಿಪ್ರಾಯಪಟ್ಟರು.

ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಬೆಂಗಳೂರಿನ ಜಯನಗರದ ಖಾಸಗಿ ಹೊಟೇಲ್ ನಲ್ಲಿ ಶನಿವಾರ ನಡೆದ ಸೌರಶಕ್ತಿಯ ಅನ್ವಯಿಕಗಳ ಕುರಿತ ಒಂದು ದಿನದ ವಿಚಾರಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸುಸ್ಥಿರ ಅಭಿವೃದ್ಧಿ ಗುರಿ ತಲುಪಲು ಜೀವನೋಪಾಯ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಸಾಧಿಸಬೇಕೆಂದರೆ ಅದು ಕುಕ್ಕುಟ ಉದ್ಯಮವೇ ಇರಲಿ, ಗಿರಣಿ, ಗಾಣ ಮುಂತಾದ ಎಲ್ಲ ಕ್ಷೇತ್ರಗಳಲ್ಲೂ ಸೌರಶಕ್ತಿ ಬಳಕೆ ಅನಿವಾರ್ಯ ಎಂದರು.

ಉದ್ಘಾಟನಾ ಭಾಷಣ ಮಾಡಿದ ಕೇಂದ್ರದ ಗ್ರಾಮೀಣ ವಿದ್ಯುದೀಕರಣ ನಿಗಮ(ಆರ್ ಇಸಿ) ದ ಕಾರ್ಯಕ್ರಮಗಳ ಹಿರಿಯ ವ್ಯವಸ್ಥಾಪಕರಾದ ಶ್ರೀ ಸೌಮ್ಯಕಾಂತ್ , ಪಳೆಯುಳಿಕೆಗಳ ಮೇಲೆ ಅವಲಂಬಿತವಾಗಿರುವ ಈಗಿನ ಇಂಧನ ಮೂಲಗಳನ್ನು ಭವಿಷ್ಯದಲ್ಲಿ ಹಸಿರು ಮತ್ತು ಶುದ್ಧ ಇಂಧನ ಮೂಲಗಳಾದ ಗಾಳಿ, ನೀರು ಮತ್ತು ಸೌರಶಕ್ತಿ ಆಧಾರಿತವಾಗಿ ರೂಪಿಸಲು ಆರ್ ಇಸಿ ಬದ್ಧವಾಗಿದೆ. ಗ್ರಾಮೀಣ ಜನರಿಗೆ ಆಧುನಿಕ ತಂತ್ರಜ್ಞಾನದೊಂದಿಗೆ ಪರಿಸರಕ್ಕೆ ಪೂರಕವಾದ ವಿಶ್ವಾಸಾರ್ಹ ಮತ್ತು ಕೈಗೆಟಕುವ ಇಂಧನವನ್ನು ಒದಗಿಸುವ ಮೂಲಕ ಅವರ ಆರ್ಥಿಕ, ಸಾಮಾಜಿಕ ಬದಲಾವಣೆಗಾಗಿ ಆರ್ ಇಸಿ ಫೌಂಡೇಷನ್ ಆರಂಭಿಸಲಾಗಿದ್ದು, ಇದಕ್ಕೆ ಸುಸ್ಥಿರ ಅಭಿವೃದ್ಧಿಯೇ ಮೂಲ ಮಂತ್ರವಾಗಿದೆ ಎಂದರು.

ಅತಿಥಿಯಾಗಿದ್ದ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಪ್ರಿಯಾ ಖಾನ್ ಅವರು, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಸೆಲ್ಲೋ ಸಂಸ್ಥೆ ಜತೆ ಕೈ ಜೋಡಿಸಲು ಮಹಾರಾಷ್ಟ್ರ ಸರ್ಕಾರ ಹೆಚ್ಚು ಉತ್ಸುಕವಾಗಿದೆ ಎಂದರು.

ಸುಸ್ಥಿರ ಇಂಧನವನ್ನು ಆಧಾರವಾಗಿಟ್ಟುಕೊಂಡು ಮಹಿಳಾ ಬಲವರ್ಧನೆಯಲ್ಲಿ ತೊಡಗಿರುವ ಬಿಹಾರದ ಜೆ. ವೈರ್ಸ್ ನಿರ್ದೇಶಕರಾದ ಸಂಜುದೇವಿ, ತಮ್ಮ ಸಂಸ್ಥೆಯ ಯಶೋಗಾಥೆಯನ್ನು ಹಂಚಿಕೊಂಡರು.

ಸೆಲ್ನೋ ಸಂಸ್ಥೆಯ ಸಿಇಒ ಮೋಹನ್ ಭಾಸ್ಕರ ಹೆಗಡೆ ಅವರು, ಕಳೆದ 75 ವರ್ಷಗಳಲ್ಲಿ ಇಂಧನ ಕ್ಷೇತ್ರದಲ್ಲಿ ಸೌರಶಕ್ತಿ ವಲಯವು ಬಹಳ ಮಹತ್ವದ್ದಾಗಿ ಬೆಳೆದಿದೆ. ಸೌರಶಕ್ತಿಯನ್ನು ಎಲ್ಲ ಕ್ಷೇತ್ರಗಳಲ್ಲೂ ವ್ಯಾಪಕವಾಗಿ ಬಳಕೆ ಮಾಡುವ ಮೂಲಕ ವಿವಿಧ ರೀತಿಯ ಉದ್ಯಮಗಳನ್ನು ಹೇಗೆ ಕಟ್ಟಬಹುದು ಎಂಬುದಕ್ಕೆ ಅನೇಕ ಉದಾಹರಣೆಗಳು ಸಿಗುತ್ತಿವೆ ಎಂದರು.
ಸೆಲ್ಕೋ ಇಂಡಿಯಾದ ನಿರ್ದೇಶಕ ಥಾಮಸ್ ಪುಲ್ಲೆಂಕೇವ್ ಮಾತನಾಡಿ, ಸೌರಶಕ್ತಿ ಕ್ಷೇತ್ರವೂ ಸೇರಿದಂತೆ ಯಾವುದೇ ಕ್ಷೇತ್ರದ ಬೆಳವಣಿಗೆಗೆ ಸಹಭಾಗಿತ್ವದ ಮಹತ್ವವನ್ನು ಒತ್ತಿ ಹೇಳಿದರು.

ಸೆಲ್ಕೋ ಫೌಂಡೇಶನ್ನ ನಿರ್ದೇಶಕರಾದ ಶ್ರೀಮತಿ ಹುದಾ ಜಾಫರ್ ಅವರು ಕಾಪ್ -28 ರ ಕುರಿತ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!