ಹೊಸ ದಿಗಂತ ವರದಿ, ರಾಯಚೂರು :
ಒಳ ಮೀಸಲಾತಿ ಪಡೆಯುವುದಕ್ಕೆ ಕಳೆದ ಮೂರು ದಶಕಗಳ ಹೋರಾಟ ಫಲ ಈಗ ದೊರೆಯುವ ಕಾಲ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ನೀಡಿದ ಭರವಸೆ ಸುಳ್ಳಾಗುವುದಿಲ್ಲ ಎಂದು ವಿಜಯಪುರದ ಸಂಸದ ರಮೇಶ ಜಿಗಜಿಣಗಿ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಮಾದಿಗ ಮುನ್ನಡೆ ಆತ್ಮಗೌರವ ಸಮಾವೇಶ ಉದ್ಘಾಟಿಸಿ ಮಾತನಾಡಿ, ಒಳ ಮೀಸಲಾತಿ ನೀಡುವುದಕ್ಕೆ ಕಾನೂನಾತ್ಮಕ ತೊಡಕುಗಳ ನಿವಾರಣೆಗೆ ಬೇಕಾದ ಸಂವಿಧಾನ ತಿದ್ದುಪಡಿಗೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದರು.
ಕಾಂಗ್ರೆಸ್ ನಾಯಕರು ಒಳ ಮೀಸಲಾತಿ ಕುರಿತು ಆಶ್ವಾಸನೆಗಳನ್ನು ನೀಡಿದರೆ ವಿನಃ ಅದನ್ನು ಜಾರಿಗೊಳಿಸಲು ಪ್ರಯತ್ನವನ್ನೇ ಮಾಡಲಿಲ್ಲ. ಸದಾಶಿವ ಆಯೋಗಕ್ಕೆ ಸಿಬ್ಬಂದಿ ಮತ್ತು ಅನುದಾನ ನೀಡದೆ ಸಿದ್ದರಾಮಯ್ಯ ಹುನ್ನಾರ ನಡೆಸಿದ್ದರು ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಮೀತಿಗೆ ಬೇಕಾದ ಅನುದಾನ, ಸಿಬ್ಬಂದಿ ಹಾಗೂ ವಾಹನ ಸೌಲಬ್ಯಗಳನ್ನು ವರದಿ ಸ್ವೀಕರಿಸಿದ್ದಲ್ಲದೆ ಒಳ ಮೀಸಲಾತಿ ವರದಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಯಿತು, ಶೀಘ್ರದಲ್ಲಿ ಅದು ಜಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಾಮರಸ್ಯ ವೇದಿಕೆ ಸಂಚಾಲಕ ವಾದಿರಾಜ ಮಾತನಾಡಿ, 2004ರಲ್ಲಿ ಸಿಎಂ ಆಗಿದ್ದ ಧರ್ಮಸಿಂಗ್ ಸದಾಶಿವ ಆಯೋಗವನ್ನು ರಚನೆ ಮಾಡಿದ್ದರು. ನಾಲ್ಕು ವರ್ಷ ಸಿಬ್ಬಂದಿ, ಅನುದಾನ ನೀಡಲಿಲ್ಲ. 2008ರಲ್ಲಿ ಬಿ.ಎಸ್.ಯಡಿಯೂರಪ್ಪ ಆಯೋಗಕ್ಕೆ 11 ಕೋಟಿ ರೂ. ನೀಡಿದ್ದರಿಂದ ಆಯೋಗ ಅಧ್ಯಯನ ನಡೆಸಿ 2012ರಲ್ಲಿ ವರದಿ ನೀಡಿತ್ತು.
೨೦೧೩ಕ್ಕೆ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ ಐದು ವರ್ಷ ಕಾಲ ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡಿಸಲಿಲ್ಲ. ಜತೆಗೆ ವರದಿಯೇ ಅವೈಜ್ಞಾನಿಕ ಎನ್ನುವ ಹೇಳಿಕೆಯನ್ನು ನೀಡಿದ್ದರು. ಈಗ ಪುನಃ ಸದಾಶಿವ ಆಯೋಗದ ವರದಿಯ ಜಪ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಸದಾಶಿವ ಆಯೋಗದ ವರದಿಯಲ್ಲಿ ಕೇವಲ ಶೇ.೧೫ರಷ್ಟು ಮೀಸಲಾತಿ ಪ್ರಸ್ತಾಪ ಇತ್ತು ಅದನ್ನು ಸಚಿವ ಮಾಧುಸ್ವಾಮಿ ನೇತೃತ್ವದಲ್ಲಿ ಸಮಿತಿ ರಚಿಸಿ ಶೇ.17ರಷ್ಟು ಮೀಸಲಾತಿಯನ್ನು ವರ್ಗೀಕರಣ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಶೀಘ್ರದಲ್ಲಿ ಜಾರಿಗೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಮಾತನಾಡಿ, ಕಾಂಗ್ರೆಸ್‌ನವರಿಗೆ ಒಳ ಮೀಸಲಾತಿ ಜಾರಿ ಮಾಡುವ ಉದ್ದೇಶವಿಲ್ಲ. ನಮ್ಮಲ್ಲಿ ಒಡಕು ಉಂಟು ಮಾಡುವ ಹುನ್ನಾರವನ್ನು ಮಾಡುತ್ತಿದ್ದಾರೆ. ದಲಿತ ಸಂಘರ್ಷ ಸಮಿತಿಯಲ್ಲಿ ಒಡಕು ಉಂಟಾಗಲು ಕಾಂಗ್ರೆಸ್ ನಾಯಕರೇ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.
ಕಾರ್ಯಕ್ರಮದಲ್ಲಿ ನಗರ ಶಾಸಕ ಡಾ.ಶಿವರಾಜ ಪಾಟೀಲ, ದಲಿತ ಮುಖಂಡರುಗಳಾದ ಸಿ.ಎಸ್.ಪಾರ್ಥಸಾರಥಿ, ಮಹಾಲಕ್ಷ್ಮಿ, ರಾಮಣ್ಣ ಬುಳ್ಳಾಹುಣಸಿ, ಪೂಜಪ್ಪ, ಬಿ.ನರಸಪ್ಪ, ಡಿ.ಒ.ಮೊರಾರ್ಜಿ, ರವೀಂದ್ರ ಜಲ್ದಾರ್ ಇದ್ದರು.