ಹೊಸದಿಗಂತ ವರದಿ ಬೆಳಗಾವಿ:
ತಾಲೂಕಿನ ಹೊಸ ವಂಟಮೂರಿಯಲ್ಲಿ ನಡೆದ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ಸಿಐಡಿ ಡಿಐಜಿ ಸುಧೀರಕುಮಾರ ರೆಡ್ಡಿ ನೃತೃತ್ವದ ತಂಡ ಸೋಮವಾರವೇ ಫೀಲ್ಡಿಗೆ ಇಳಿದಿದ್ದು, ತನಿಖೆ ಕೈಗೆತ್ತಿಕೊಂಡಿದೆ.
ಮಹಿಳೆ ಮೇಲೆ ನಡೆದ ಈ ದೌರ್ಜನ್ಯ ಪ್ರಕರಣವನ್ನು ಸರ್ಕಾರ ಸಿಐಡಿಗೆ ಒಪ್ಪಿಸುವುದೇ ತಡ ರವಿವಾರ ರಾತ್ರಿಯೇ ಆಗಮಿಸಿದ್ದ ಸಿಐಡಿ ತಂಡ, ಸೋಮವಾರ ಬೆಳಿಗ್ಗೆ ಆಸ್ಪತ್ರೆಗೆ ಧಾವಿಸಿ ಸಂತ್ರಸ್ತೆ ಹಾಗೂ ಅವರ ಕುಟುಂಬದ ಸದಸ್ಯರಿಂದ ಮಾಹಿತಿ ಪಡೆದುಕೊಂಡರು.
ಸಿಐಡಿ ಎಸ್ಪಿ ಪೃಥ್ವಿಕ್, ರಶ್ಮಿ ಪರಡ್ಡಿ ಹಾಗೂ ಡಿವೈಎಸ್ಪಿ ಅಂಜುಮಳ ನಾಯಕ ಅವರನ್ನೊಳಗೊಂಡ ಆರು ಸದಸ್ಯರ ತಂಡ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದೆ. ಶನಿವಾರವಷ್ಟೇ ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿದೆ.
ಮಾನವ ಹಕ್ಕುಗಳ ಆಯೋಗದ ಡಿಐಜಿ ಬೆಳಗಾವಿಗೆ
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಡಿಐಜಿ ಸುನೀಲಕುಮಾರ್ ಮೀನಾ ಅವರೂ ಕೂಡ ಸೋಮವಾರ ಬೆಳಿಗ್ಗೆ ನಗರಕ್ಕೆ ಧಾವಿಸಿ ಬಂದಿದ್ದಾರೆ. ವಿಶೇಷ ವಿಮಾನದ ಮೂಲಕ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರುನ್ನು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಲಕ್ಷ್ಮಣ ಬಬಲಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಷ್ಟೇ ಬಂದಿದ್ದೇನೆ ಪ್ರಕರಣ ಸಂಬಂಧ ಸಂತ್ರಸ್ತ ಮಹಿಳೆ ಹಾಗೂ ಅವರ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಮಾಹಿತಿ ಪಡೆಯಲಿದ್ದೇನೆ ಎಂದು ಹೇಳಿದರು.