ಹೊಸದಿಗಂತ ವರದಿ ಮಡಿಕೇರಿ:
ಕೇರಳದಲ್ಲಿ ಕೋವಿಡ್ ರೂಪಾಂತರಿ ತಳಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ. ಹೆಚ್ಚು ಪಾಸಿಟಿವ್ ಪ್ರಕರಣಗಳು ಕಂಡು ಬಂದರೆ ವಾಹನ ನಿರ್ಬಂಧದ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸ್ಪಷ್ಟಪಡಿಸಿದ್ದಾರೆ.
ಕುಶಾಲನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳ ಗಡಿಗೆ ಹೊಂದಿಕೊಂಡಂತಿರುವ ಸ್ಥಳಗಳಲ್ಲಿ ನಿಗಾ ತಪಾಸಣೆ ಮಾಡಲಾಗುವುದಲ್ಲದೆ, ಪರೀಕ್ಷೆ ಹೆಚ್ಚಿಸಲು ಆರೋಗ್ಯ ಇಲಾಖೆಗೆ ಆದೇಶಿಸಲಾಗಿದೆ ಎಂದರು.
ಕೊವೀಡ್’ಗೆ ಸಂಬಂಧಿಸಿದಂತೆ ಆಸ್ಪತ್ರೆಗಳಲ್ಲಿ ಅಗತ್ಯವಿರುವ ಬೆಡ್, ಆಕ್ಸಿಜನ್, ವೆಂಟಿಲೇಟರ್, ಪಿಪಿ ಕಿಟ್, ಮಾಸ್ಕ್ ಸಿಧ್ಧವಾಗಿರಿಸುವಂತೆ ಸೂಚಿಸಲಾಗಿದ್ದು, ಕೋವಿಡ್ ರೂಪಾಂತರಿ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಲು ಕ್ರಮಕೈಗೊಳ್ಳಲಾಗಿದೆ. 60 ವರ್ಷ ಮೇಲ್ಪಟ್ಟವರು, ಹೃದಯ ಸಂಬಂಧಿ ಸಮಸ್ಯೆ ಇರುವವರು, ಕೊರೋನಾಕ್ಕೆ ಸಂಬಂಧಿಸಿದ ಲಕ್ಷಣ ಕಂಡು ಬಂದವರು ಕಡ್ಡಾಯ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಕೋವಿಡ್ ಸಂಬಂಧ ಅಗತ್ಯ ಕ್ರಮಕೈಗೊಳ್ಳುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಕೇಂದ್ರ ಸರ್ಕಾರದ ತಜ್ಞರ ಜೊತೆಗೂ ಚರ್ಚೆ ಮಾಡಲಾಗಿದೆ. ರಾಜ್ಯ ಸರಕಾರ ಕೂಡಾ ಶೀಘ್ರದಲ್ಲೇ ಈ ಸಂಬಂಧ ಸಭೆ ನಡೆಸಿ ಅಗತ್ಯ ಮಾರ್ಗಸೂಚಿ ಹೊರಡಿಸಲಿದೆ.ಹೆಚ್ಚು ಪಾಸಿಟಿವ್ ಪ್ರಕರಣ ಪತ್ತೆಯಾದರೆ ಕೇರಳದೊಂದಿಗಿನ ಸಂಚಾರ ನಿರ್ಬಂಧದ ಬಗ್ಗೆಯೂ ಚಿಂತನೆ ನಡೆಸಲಾಗುವುದು ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಶಾಸಕ ಡಾ. ಮಂಥರ್ ಗೌಡ, ಕಾಂಗ್ರೆಸ್ ಮುಖಂಡರಾದ ಹೆಚ್.ಎಸ್. ಚಂದ್ರಮೌಳಿ, ಧರ್ಮಜ ಉತ್ತಪ್ಪ ಮತ್ತಿತರರು ಹಾಜರಿದ್ದರು.