ಹೊಸದಿಗಂತ ವರದಿ, ಚಿತ್ರದುರ್ಗ:
ಮಾಜಿ ಸಚಿವ ಗೋವಿಂದ ಕಾರಜೋಳ ಸುದ್ದಿಗೋಷ್ಠಿ ನಡೆಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಒಳ ನುಗ್ಗಿದ ಕೆಲವರು ದಾಂಧಲೆ ನಡೆಸಿದ ಘಟನೆ ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆಯಿತು.
ನಗರದ ತರಾಸು ರಂಗಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ’ಜಿಲ್ಲಾ ಮಾದಿಗ ಮುನ್ನಡೆ ಆತ್ಮಗೌರವ ಸಮಾವೇಶ’ ಉದ್ಘಾಟನಾ ಕಾರ್ಯಕ್ರಮಕ್ಕೆ ಗೋವಿಂದ ಕಾರಜೋಲ ಆಗಮಿಸಿದ್ದರು. ಸಮಾವೇಶಕ್ಕೂ ಮುನ್ನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಲು ಮುಂದಾದರು. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಕೆಲವರು ಸುದ್ದಿಗೋಷ್ಠಿ ನಡೆಯುತ್ತಿದ್ದ ಸಭಾಂಗಣಕ್ಕೆ ನುಗ್ಗಿ ಗಲಾಟೆ ಮಾಡಿದರು.
ನೀವು ಸಮಾಜ ಕಲ್ಯಾಣ ಸಚಿವರಾಗಿದ್ದಾಗ ದಲಿತರಿಗೆ ಅನ್ಯಾಯವಾಗಿದೆ. ದಲಿತರಿಗೆ ಸಾಲ, ಸಬ್ಸಿಡಿ ನೀಡುವ ಯೋಜನೆಯಲ್ಲಿ ಕಡಿತ ಮಾಡಲಾಗಿದೆ. ಎಂದು ಗೋವಿಂದ ಕಾರಜೋಲ ಅವರ ಜೊತೆ ದಲಿತ ಮುಖಂಡ ಹನುಮಂತಪ್ಪ ದುರ್ಗ ಮತ್ತಿತರರು ವಾಗ್ವಾದ ನಡೆಸಿದರು.
ಇದರಿಂದ ಅಸಮಾಧಾನಗೊಂಡ ಗೋವಿಂದ ಕಾರಜೋಳ, ಸುದ್ದಿಗೋಷ್ಠಿ ನಡೆಯುವ ಸ್ಥಳಕ್ಕೆ ಹೀಗೆ ಏಕಾಏಕಿ ನುಗ್ಗಿ ಗೂಂಡಾಗಿರಿ ಮಾಡುವುದು ಸರಿಯಲ್ಲ. ಮೊದಲು ಇಲ್ಲಿಂದ ಹೊರಗೆ ನಡೆಯಿರಿ. ನನ್ನ ನಲವತ್ತು ವರ್ಷದ ರಾಜಕೀಯ ಜೀವನದಲ್ಲಿ ನಾನು ಇಂತಹ ಘಟನೆಯನ್ನು ನೋಡಿರಲಿಲ್ಲ. ಇದು ಗೂಂಡಾರಾಜ್ಯವಾಗಿದೆ ಎಂದು ಕಿಡಿಕಾರಿದರು.
ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಗಮನ ನೀಡಬೇಕು. ಗಲಾಟೆ ಮಾಡಿದವರನ್ನು ಬಂಧಿಸಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಪೂರ್ವವಲಯ ಐಜಿಪಿ ಅವರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದರು. ಸುದ್ದಿಗೋಷ್ಠಿ ಸಂದರ್ಭದಲ್ಲಿ ಒಳ ನುಗ್ಗಿದ ಗೂಂಡಾಗಳು ದಾಂಧಲೆ ನಡೆಸಿದ್ದಾರೆ. ಕೂಡಲೇ ಅವರನ್ನು ಬಂಧಿಸಬೇಕು. ತಪ್ಪಿದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ನಗರಠಾಣೆ ಸಿಪಿಐ ತಿಪ್ಪೇಸ್ವಾಮಿ ಪ್ರವಾಸಿ ಮಂದಿರಕ್ಕೆ ಆಗಮಿಸಿ ಗಲಾಟೆ ಕುರಿತು ಮಾಹಿತಿ ಪಡೆದರು.