ಹೊಸ ದಿಗಂತ ವರದಿ, ಚಿತ್ರದುರ್ಗ:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಆರೇಳು ತಿಂಗಳಾಯಿತು. ಒಂದೇ ಒಂದು ಅಭಿವೃದ್ಧಿ ಕಾಮಗಾರಿಗಳು ಸಹ ನಡೆದಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿನ ಕಾಮಗಾರಿಗಳನ್ನು ರದ್ದುಪಡಿಸಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಆರೋಪಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಅಧಿಕಾರದ ಅವಧಿಯಲ್ಲಿ ಅನೇಕ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದೇ ಒಂದು ಯೋಜನೆ, ಕಾಮಗಾರಿಗೆ ಚಾಲನೆ ನೀಡುವ ಕೆಲಸವನ್ನು ಮಾಡಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ದೀನ ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ. ಬೆಳಗಾವಿ ಅಧಿವೇಶ ನಡೆದ ಸಂದರ್ಭದಲ್ಲಿ ಬೆಳಗಾವಿಯ ಪೃಥ್ವಿಸಿಂಗ್ ಎಂಬ ಯುವಕನಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚಂದ್ರಹಟ್ಟಿ ಹೊಳೆಯವರು ಚಾಕು ಹಾಕಿಸಿದ್ದಾರೆ. ಈ ಸಂಬಂಧ ಇದುವರೆಗೂ ಯಾರನ್ನೂ ಬಂಧಿಸಿಲ್ಲ. ಎಫ್‌ಐಆರ್ ಸಹ ಆಗಿರುವುದಿಲ್ಲ. ಮಂತ್ರಿಯವರ ಪ್ರಭಾವಕ್ಕೆ ಒಳಗಾಗಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಪಾದಿಸಿದರು.
ಬೆಳಗಾವಿ ಹತ್ತಿರದ ವಂಟೂರಿನಲ್ಲಿ ಮಹಿಳೆ ಮೇಲೆ ದೌರ್ಜನ್ಯ ನಡೆಸಲಾಗಿದೆ. ಕಂಬಕ್ಕೆ ಕಟ್ಟಿ ಹಾಕಿ ಹೊಡೆದು ಹೇಯ ಕೃತ್ಯ ಮಾಡಿದ್ದಾರೆ. ಅವರ ವಿರುದ್ಧ ಇದುವರೆಗೂ ಯಾವುದೇ ಕ್ರಮ ಆಗಿಲ್ಲ. ವಸತಿ ಶಾಲೆಯಲ್ಲಿ ಮಲ ಗುಂಡಿಗಳನ್ನು ಸ್ವಚ್ಛತೆ ಮಾಡಲು ಮಕ್ಕಳನ್ನು ಬಳಸಿಕೊಂಡು ಸ್ಕ್ಯಾವೆಂಜರ್ ರೀತಿಯಲ್ಲಿ ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸರ್ಕಾರ ದಲಿತರ ಮೇಲೆ ದೌರ್ಜನ್ಯ ಎಸಗಿ ಅಮಾನವೀಯವಾಗಿ ವರ್ತನೆ ಮಾಡುತ್ತಿದೆ. ಘಟನಾ ಸ್ಥಳಗಳಿಗೆ ಯಾವುದೇ ಸರ್ಕಾರದ ಜನಪ್ರತಿನಿಧಿಗಳು ಭೇಟಿ ನೀಡಿಲ್ಲ. ಹೆಣ್ಣುಮಕ್ಕಳ ಸ್ನಾನಗೃಹಕ್ಕೆ ಹೋಗಿ ವಿಡಿಯೋ ಮಾಡಿದವರ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿ ಒಳಗಡೆ ಹಾಕಬೇಕೆಂದು ಆಗ್ರಹಿಸಿದರು.
ಬೆಳಗಾವಿ ಅಧಿವೇಶನ ಕಾಟಾಚಾರದ ಅಧಿವೇಶನ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅವಧಿಯಲ್ಲಿ ಉತ್ತರ ಕರ್ನಾಟಕದ ಜನರ ಕುಂದು ಕೊರತೆಗಳನ್ನು ಚರ್ಚೆ ಮಾಡಿ ಯೋಚನೆಗಳನ್ನು ರೂಪಿಸಲಿಕ್ಕೆ ವಿಧಾನಸೌಧ ನಿರ್ಮಾಣ ಮಾಡಲಾಯಿತು. ಬೆಳಗಾವಿ ಅಧಿವೇಶದಲ್ಲಿ ಸಿದ್ದರಾಮಯ್ಯ ಕಾಟಾಚಾರದ 08 ಘೋಷಣೆಗಳನ್ನು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ಸರ್ಕಾರ ಬಂದ ಮೇಲೆ ಉದ್ಯಮಗಳು ಬಂದಾಗಿವೆ. ರಾಜ್ಯದ ಜನತೆ ಉದ್ಯೋಗ ಹುಡುಕಿಕೊಂಡು ಗೋವಾ, ಮಹಾರಾಷ್ಟ್ರ, ಬೆಂಗಳೂರು ಕಡೆಗೆ ಹೊರಟಿದ್ದಾರೆ. ಮುಖ್ಯಮಂತ್ರಿಗಳು ಅಸಲು ಕಟ್ಟಿದರೆ ಬಡ್ಡಿ ಮನ್ನಾ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ ಈ ಹಿಂದೆ ಯಡಿಯೂರಪ್ಪನವರು 3 ಲಕ್ಷದವರೆಗೆ 0% ಪರ್ಸೆಂಟ್ ಬಡ್ಡಿದರದಲ್ಲಿ ಸಾಲ ನೀಡಿದ್ದರು ಎಂದು ಹೇಳಿದರು.
ಸಿದ್ದರಾಮಯ್ಯ ಅವರಿಗೆ ರೈತರ ಬಗ್ಗೆ ಕಾಳಜಿ ಇದ್ದಲ್ಲಿ 2 ಲಕ್ಷದವರೆಗೆ ಸಾಲ ಮನ್ನಾ ಮಾಡಲಿ. 11,144 ಕೋಟಿ ಎಸ್‌ಸಿಪಿ, ಟಿಎಸ್‌ಪಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಹಣವನ್ನು ಗ್ಯಾರೆಂಟಿಗೆ ಉಪಯೋಗ ಮಾಡಿಕೊಂಡಿದ್ದಾರೆ. ಅದನ್ನು ವಾಪಸ್ ಕೊಡಬೇಕು. ಬರದಿಂದ ರಾಜ್ಯದಲ್ಲಿ ರೈತರು ಕಂಗಲಾಗಿದ್ದಾರೆ. ರೈತರಿಗೆ ಎಕರೆಗೆ 25,000 ರೂ.ನಂತೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಜಿಲ್ಲಾಧ್ಯಕ್ಷ ಎ.ಮುರುಳಿ, ಕಲ್ಲೇಶಯ್ಯ, ನಾಗರಾಜ್ ಬೇದ್ರೆ ಮತ್ತಿತರರು ಹಾಜರಿದ್ದರು.