ಹೊಸದಿಗಂತ ವರದಿ ಚಿತ್ರದುರ್ಗ:
ಹಣಕ್ಕಾಗಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸದೆ ಬಡವರು ಸಹ ಶಿಕ್ಷಣ ಪಡೆಯಲಿ ಎಂಬ ಉದ್ದೇಶದಿಂದ ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡಲಾಗಿದೆ ಎಂದು ಶ್ರೀ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ಹೊಳಲ್ಕೆರೆ ಕ್ಷೇತ್ರದ ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.
ಚಿತ್ರದುರ್ಗ ನಗರದ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಸಂಸ್ಥೆಯ ಆವರಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 1983ರಲ್ಲಿ ಶಿಕ್ಷಣ ಸಂಸ್ಥೆ ಪ್ರಾರಂಭ ಮಾಡಿ ಇಲ್ಲಿಯವರೆಗೂ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು, ಶಿಕ್ಷಕರ ತರಬೇತಿ ಕಾಲೇಜು, ನರ್ಸಿಂಗ್ ಕಾಲೇಜು, ಫಾರ್ಮಸಿ ಕಾಲೇಜು ಹಾಗೂ ಆರ್ಯರ್ವೇದ ವೈದ್ಯಕೀಯ ಕಾಲೇಜನ್ನು ಪ್ರಾರಂಭ ಮಾಡಲಾಗಿದೆ. ಇದರಲ್ಲಿ ಸ್ವೇಟ್ ಮತ್ತು ಸಿಬಿಎಸ್‌ಸಿ ತರಗತಿಗಳನ್ನು ಸಹ ನಡೆಸಲಾಗುತ್ತಿದೆ ಎಂದರು.
1983ರಲ್ಲಿ ಈ ಕಟ್ಟಡದ ಜಾಗ ಪಡೆದು ನೂತನ ಕಟ್ಟಡ ನಿರ್ಮಾಣ ಮಾಡಿ ಮಕ್ಕಳ ಕಲಿಗೆ ಅವಕಾಶ ಕಲ್ಪಿಸಲಾಯಿತು. ನನಗೆ ಬೆಂಗಳೂರಿನಲ್ಲಿಯೂ ಉತ್ತಮ ಜಾಗ ಸಿಕ್ಕಿತ್ತು. ಅಲ್ಲಿ ಶಾಲೆ ಆರಂಭಿಸುವಂತೆ ಕೆಲವರು ಹೇಳಿದ್ದರು. ಆದರೆ ನನಗೆ ನನ್ನ ಊರು, ನನ್ನ ಜನ ಎಂಬ ಆಭಿಮಾನದಿಂದ ಇಲ್ಲಿಯ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಇಲ್ಲಿಯೇ ಶಾಲೆ ಪ್ರಾರಂಭ ಮಾಡಿದೆ. ನನಗೆ ಹಣ ಗಳಿಸಬೇಕೆಂಬ ಉದ್ದೇಶ ಇದಿದ್ದರೆ, ಬೆಂಗಳೂರಿನಲ್ಲಿ ಶಾಲೆ ಪ್ರಾರಂಭ ಮಾಡುತ್ತಿದೆ. ಆದರೆ ನನ್ನ ಜಿಲ್ಲೆಯ ಮಕ್ಕಳು ಶಿಕ್ಷಣ ಪಡೆಯಬೇಕೆಂಬ ಉದ್ದೇಶದಿಂದ ನನ್ನ ಊರಿನಲ್ಲಿಯೇ ಶಾಲೆ ಪ್ರಾರಂಭ ಮಾಡಿದೆ. ಸೇವಾ ಮನೋಭಾವದಿಂದ ಈ ಕೆಲಸ ಮಾಡುತ್ತಿದ್ದೇನೆಯೇ ಹೊರತು ಹಣಕ್ಕಾಗಿ ಅಲ್ಲ ಎಂದರು.
ನನ್ನ ಶಿಕ್ಷಣ ಸಂಸ್ಥೆ ದಿನದಿಂದ ದಿನಕ್ಕೆ ಪ್ರಗತಿ ಕಾಣುತ್ತಿದೆ. ನಮ್ಮ ಕಾಲೇಜಿನ ವಿದ್ಯಾರ್ಥಿನಿ ಬಿ.ಕಾಂ.ನಲ್ಲಿ ದಾವಣಗೆರೆ ವಿ.ವಿ.ಗೆ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ. 5000 ಮಕ್ಕಳು ನಮ್ಮ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಶಿಕ್ಷಕರು ಸೇರಿದಂತೆ 500 ರಿಂದ 600 ಜನ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಸಹ ಕುಟುಂಬದ ರೀತಿಯಲ್ಲಿ ಇದ್ದಾರೆ. ಒಂದೇ ಮನೆಯ ವಾತಾವರಣ ನಮ್ಮಲ್ಲಿದೆ. ನಮ್ಮ ಸಂಸ್ಥೆಯಲ್ಲಿ ಕಲಿತ ಹಲವಾರು ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದಾರೆ. 40 ವರ್ಷ ಸುಧೀರ್ಘವಾಗಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ನಡೆಸಲಾಗಿದೆ. ಎಲ್ಲಾ ವರ್ಗದವರಿಗೂ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದೇನೆ ಎಂದು ಹೇಳಿದರು.
ಶ್ರೀ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಘುಚಂದನ್ ಮಾತನಾಡಿ, ನಮ್ಮ ಶಿಕ್ಷಣ ಸಂಸ್ಥೆಯ 40ನೇ ವರ್ಷದ ಅಂಗವಾಗಿ ಡಿ.21 ರಿಂದ 24 ರವರೆಗೆ ಡೆಸ್ಟಿನಿ-2023ಕಾರ್ಯಕ್ರಮ ನಡೆಸಲಾಗುತ್ತಿದೆ. ಡಿ.21ರಂದು ಸಂಜೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಚಿಕ್ಕಮಗಳೂರಿನ ಗೌರಿಗದ್ದೆಯ ಅವಧೂತ ಆಶ್ರಮದ ಶ್ರೀ ವಿನಯ ಗೂರೂಜಿ, ಜಿ.ಪಂ. ಸಿಇಓ ಸೋಮಶೇಖರ್, ಶ್ರೀ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಚಂದ್ರಕಲಾ, ಹೆಚ್ಚುವರಿ ಪೋಲಿಸ್ ಅಧಿಕಾರಿ ಎಸ್.ಜೆ.ಕುಮಾರಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರವಿಶಂಕರ್ ರೆಡ್ಡಿ ಭಾಗವಹಿಸುವರು ಎಂದರು.
ವೇದಿಕೆ ಕಾರ್ಯಕ್ರಮದ ಬಳಿಕ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಹಾಸ್ಯ ಸಾಹಿತಿಗಳಾದ ಸುಧಾ ಬರಗೂರು, ಮಿಮಿಕ್ರಿ ಗೋಪಿ, ಪ್ರಹ್ಲಾದ್ ಜೋಷಿ ಹಾಗೂ ರಾಘವೇಂದ್ರ ಆಚಾರ್ ಹಾಸ್ಯ ಕಾರ್ಯಕ್ರಮ ನಡೆಸಿಕೊಡುವರು. ಡಿ.22 ರಂದು ಸಂಜೆ 6:30ಕ್ಕೆ ಹೆಸರಾಂತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರಿಂದ ಸಂಗೀತ ಕಾರ್ಯಕ್ರಮ ನಡೆಯುವುದು. ಡಿ.23 ರಂದು ಚಂದನ್ ಶಟ್ಟಿ ಅವರಿಂದ ಸಂಗೀತ ಕಾರ್ಯಕ್ರಮ. ಡಿ.24 ರಂದು ಡಿಜೆ ನೈಟ್ ಎಂಬ ಕಾರ್ಯಕ್ರಮ ನಡೆಯಲಿದೆ ಎಂದು ರಘುಚಂದನ್ ತಿಳಿಸಿದರು.