ಹೊಸದಿಗಂತ ವರದಿ ಆಲೂರು :
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಜಮೀನು ಕಳೆದಕೊಂಡ ರೈತರಿಗೆ ಪರಿಹಾರವನ್ನು ನೀಡದೆ ತಾಲ್ಲೂಕಿನ ಕೆಲವೆಡೆ ರಸ್ತೆ ಕಾಮಗಾರಿಯನ್ನು ನಡೆಸುತ್ತಿರುವುದು ಸರಿಯಲ್ಲ, ಪರಿಹಾರ ನೀಡಿದ ನಂತರವಷ್ಟೆ ಕಾಮಗಾರಿಯನ್ನು ಮುಂದುವರೆಸಬೇಕು ಎಂದು ಎನ್.ಎಚ್.ಎ.ಐ ಅಧಿಕಾರಿಗಳಿಗೆ ಶಾಸಕ ಸಿಮೆಂಟ್ ಮಂಜು ಸೂಚನೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ 75 ರ ರಸ್ತೆ ಕಾಮಗಾರಿಯನ್ನು ವೀಕ್ಷಣೆ ಮಾಡಿದ ಶಾಸಕ ಮಂಜು ಪತ್ರಿಕೆಯೊಂದಿಗೆ ಮಾತನಾಡಿದರು. ರಸ್ತೆ ಕಾಮಗಾರಿ ಕೆಲಸ ಆರಂಭಗೊಂಡು 7-8 ವರ್ಷ ಕಳೆದರೂ ಪೂರ್ಣಗೊಳ್ಳದಿರುವುದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ. ಗ್ರಾಮೀಣ ಭಾಗದಿಂದ ಮುಖ್ಯ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಲ್ಪಿಸುವ ಕಡೆ ಯಾವುದೇ ಸೂಚನಾ ಫಲಕವನ್ನು ಹಾಕದೇ ಇರುವುದು ಅವೈಜ್ಞಾನಿಕ ಕಾಮಗಾರಿಯಿಂದ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಬೈರಾಪುರ ಗ್ರಾಮದಲ್ಲಿ ಸರ್ವಿಸ್ ರಸ್ತೆಯ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ಹೈವೆ ಕಾಮಗಾರಿಯನ್ನು ನಡೆಸುತ್ತಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.
ಅಂಡರ್ ಪಾಸ್ ರಸ್ತೆಯಿಂದ ಸರ್ವಿಸ್ ರಸ್ತೆ 20 ಅಡಿ ಎತ್ತರದಲ್ಲಿದ್ದು, ಮನೆಗಳು , ಮಳಿಗೆಗಳು ಕುಸಿಯುವ ಹಂತದಲ್ಲಿದ್ದು, ಪ್ರಾಣ ಭಯದಲ್ಲಿಯೇ ಕುಟುಂಬಸ್ಥರು ವಾಸ ಮಾಡಬೇಕಾದ ಅನಿವಾರ್ಯತೆಯಿದೆ. ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಯಾವುದೇ ಸೂಚನಾ ಫಲಕಗಳನ್ನು, ಸ್ಪೀಡ್ ಬ್ರೇಕರ್ ಗಳನ್ನು ಅಳವಡಿಸದಿರುವುದು ಅಪಘಾತಕ್ಕೆ ಅಹ್ವಾನ ನೀಡುವಂತಿದೆ. ಬೈರಾಪುರ ಗ್ರಾಮದಲ್ಲಿ ಸುಮಾರು 20 ಮಳಿಗೆಗಳು ಬಾಗಿಲು ತೆರೆದು 7-8 ವರ್ಷ ಕಳೆದಿದ್ದು ಜೀವನ ನಡೆಸುವುದು ಕಷ್ಟವಾಗಿದೆ. ಕೆಲವರು ವ್ಯಾಪಾರವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಇವರಿಗೆ ರಾಷ್ಟ್ರೀಯ ಹೆದ್ದಾರಿ ಕೆಲಸದಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಪರಿಹಾರ ನೀಡಿದ್ದ ಭೂಮಿಗಿಂತ ಹೆಚ್ಚು ಒತ್ತುವರಿ ಮಾಡಿಕೊಂಡು ಹೈ ವೈ ಪ್ರಾಧಿಕಾರ ಕಾರ್ಯನಿರ್ವಹಿಸುತ್ತಿರುವುದು ಜನರನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ತಳ್ಳಿದಂತಾಗಿದೆ. ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಸೂಚನಾ ಫಲಕವನ್ನು ಅಳವಡಿಸಬೇಕು. ಬಿರುಕು ಬಿಟ್ಟಿರುವ ಜಾಗಗಳಲ್ಲಿ ಹೆವಿ ವೆಹಿಕಲ್ ವಾಹನವನ್ನು ಬಿಡದಂತೆ ಎಚ್ಚರಿಕೆ ವಹಿಸಬೇಕು ಇಲ್ಲವಾದಲ್ಲಿ ಯಾವುದೇ ಜೀವಹಾನಿ ನಡೆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ನೇರ ಹೊಣೆಯನ್ನು ಹೊರಬೇಕಾಗುತ್ತದೆ. ಬೈರಾಪುರದಲ್ಲಿ ಸ್ಥಾಪಿಸುತ್ತಿರುವ ಟೋಲ್ ನೀತಿ ನಿಯಮಕ್ಕೆ ಬಾಹಿರವಾಗಿದ್ದು, ಅತಿಕ್ರಮಣದಿಂದ ಟೋಲ್ ಸ್ಥಾಪಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದರು.
ಅಂಡರ್ ಪಾಸ್ ರಸ್ತೆ ನಿರ್ಮಾಣದಿಂದ ಹಾಗೂ ಸರ್ವಿಸ್ ರಸ್ತೆ ಕಾಮಗಾರಿ ಪೂರ್ಣಗೊಳಿಸದೆ ಇರುವುದರಿಂದ ಬೈರಾಪುರ ಗ್ರಾಮದ ರಸ್ತೆ ಇಕ್ಕೆಲದಲ್ಲಿರಲ್ಲಿರುವ ಮನೆಗೆ ಓಡಾಡಲು ಅರ್ಧ ಕಿ.ಮೀ ಬಳಸಿಕೊಂಡು ಓಡಾಡಬೇಕಾದ ಅನಿವಾರ್ಯತೆಯಿದೆ. ರಸ್ತೆಯ ಗೆರೆ ಕುಸಿಯುವ ಹಂತದಲ್ಲಿದ್ದು, ಇಪ್ಪತ್ತಕ್ಕೂ ಹೆಚ್ಚು ಮನೆಗಳು ಧರೆಗುರುಳುವ ಭೀತಿಯಲ್ಲಿ ಜನರು ವಾಸಿಸುವಂತಾಗಿದೆ. ಇಷ್ಟೆಲ್ಲ ತೊಂದರೆ ಅನುಭವಿಸುತ್ತಿರುವ ಜನರ ನೋವನ್ನು ಸರಿಪಡಿಸಬೇಕೆಂದರೆ ಶೀಘ್ರದಲ್ಲಿಯೇ ಹೈವೆ ಕಾಮಗಾರಿಯನ್ನು ಮುಗಿಸಿಕೊಡಬೇಕೆಂದು ಶಾಸಕರಿಗೆ ಸಾರ್ವಜನಿಕರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಶೃತಿ, ಎ.ಆರ್.ಟಿ.ಓ ಮಮತ, ರಾಷ್ಟ್ರೀಯ ಹದ್ದಾರಿ, ಡೆಪ್ಯೂಟಿ ಪ್ರೋಜೆಕ್ಟ್ ಮ್ಯಾನೇಜರ್ ಶೇಖರ್, ಸರ್ಕಲ್ ಇನ್ಸ್ ಪೆಕ್ಟರ್ ಗಂಗಾಧರ್, ಸಬ್ ಇನ್ಸ್ ಪೆಕ್ಟರ್ ಧನಬಾಯಿ ಕಡಪಟ್ಟಿ, ಬೈರಾಪುರ ಗ್ರಾ.ಪಂ ಅಧ್ಯಕ್ಷರದ ಹೇಮ ಮಂಜೇಗೌಡ, ಉಪಾಧ್ಯಕ್ಷೆ ಸವಿತ ರಂಗಸ್ವಾಮಿ ಸದಸ್ಯರಾದ ಗಣೇಶ್, ಬಿಜೆಪಿ ಮುಖಂಡರು ರುದ್ರೇಗೌಡ, ಮಾಜಿ ಅಧ್ಯಕ್ಷ ವೀರಭದ್ರಸ್ಥಾಮಿ, ಸಿ.ಡಿ ಅಶೋಕ್, ಬಿ.ಜೆ.ಪಿ ಮುಖಂಡರಾದ ಅಜಿತ್ ಚಿಕ್ಕಕಣಗಾಲು, ಲೊಕೇಶ್ ಕಣಗಾಲು, ಹನುಮಂತೇಗೌಡ, ದೊರೆಗೌಡ, ಮೋಹನ್ ಮಾವನೂರು, ಬೈರಾಪುರ ಗ್ರಾಮಸ್ಥರಾದ ಬಾಲಕೃಷ್ಣ, ಮಣಿಪುರ ಕೃಷ್ಣೇಗೌಡ, ಶೇಖರ್ ಮುಂತಾದವರು ಉಪಸ್ಥಿತರಿದ್ದರು.