ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕಾನಂದ ಜಿಲ್ಲೆಯ ಸುಬ್ರಹ್ಮಣ್ಯದ ನೂಚಿಲದ ನಿವಾಸಿ ಪ್ರಸ್ತುತ ಕುಮಾರಪರ್ವತದ ಗಿರಿಗದ್ದೆಯಲ್ಲಿ ವಾಸಿಸುತ್ತಿದ್ದ ಚಾರಣೀಗರ ಅನ್ನದಾತ ಗಿರಿಗದ್ದೆ ಮಹಾಲಿಂಗೇಶ್ವರ ಭಟ್(ಮಹಾಲಿಂಗ ಭಟ್) (೬೭) ಅವರು ಹೃದಯಾಘಾತದಿಂದ ಬುಧವಾರ ಮುಂಜಾನೆ ಮಂಗಳೂರು ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಓರ್ವ ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ.
ನಗು ಮೊಗದ ಸೇವೆ:
ಕುಮಾರ ಪರ್ವತ ಚಾರಣ ಒಂದು ದಿನದಲ್ಲಿ ಮುಗಿಯುವಂತದ್ದು ಕ? ಸಾಧ್ಯ ಹಾಗಾಗಿ ಚಾರಣಿಗರು ಭಟ್ರ ಮನೆಯಲ್ಲಿ ಒಂದು ದಿನ ನಿಂತು ಮಾರನೇ ದಿನ ಪರ್ವತ ಹತ್ತಿ ಇಳಿಯುತ್ತಾರೆ. ಆ ಒಂದು ದಿನದಲ್ಲಿ ಭಟ್ರು ಕೊಡುವ ಅನ್ನ, ತಿಳಿ ಸಾರು, ಮಜ್ಜಿಗೆ ಉಪ್ಪಿನಕಾಯಿ ಅಮೃತಕ್ಕೆ ಸಮ. ಭಟ್ರು ನಗುನಗುತ್ತಾ, ಮಾತಾಡಿಸುತ್ತಾ ಊಟ ಬಡಿಸುವಾಗ ಅವರ ಬಗ್ಗೆ ಹೇಳಲಾಗದ? ಗೌರವ ಪ್ರೀತಿ ತುಂಬಿ ಬರುತ್ತಿತ್ತು. ಭಟ್ರ ಮನೆಯಲ್ಲಿ ಕೊಡುವ ಆತಿಥ್ಯ ಯಾವುದೇ ಸ್ಟಾರ್ ಹೋಟೆಲ್‌ಗೆ ಕಡಿಮೆ ಇರಲಿಲ್ಲ. ಆಧುನಿಕ ಯುಗದಲ್ಲಿ ಕಾಡಿನ ಮದ್ಯೆ ಬದುಕು ಕಟ್ಟಿಕೊಂಡ ಭಟ್ಟರ ಸಾಹಸ ಶ್ರೇಷ್ಠವಾದುದು.
ಚಾರಣೀಗರ ಅನ್ನದಾತ:
ಇವರು ಕುಮಾರಪರ್ವತ ಚಾರಣಿಗರಿಗೆ ಉಪಚಾರ, ಮಾರ್ಗದರ್ಶನ, ಆಹಾರ ತಯಾರಿಸಿ ನೀಡುವ, ಆಶ್ರಯ ನೀಡುವ ಮೂಲಕ ಚಾರಣೀಗರ ಅನ್ನದಾತ ಮತ್ತು ಚಾರಣೀಗರ ಅನ್ನದೇವರು ಎಂದು ಜನಜನಿತರಾಗಿದ್ದರು.ಜನಾನುರಾಗಿಯಾಗಿದ್ದ ಇವರು ಚಾರಣಿಗರ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದರು. ಕುಮಾರಪರ್ವತ ಚಾರಣಕ್ಕೆ ತೆರಳುವ ಹೆಚ್ಚಿನವರು ಇವರನ್ನು ಸಂಪರ್ಕಿಸಿಯೇ ಆಗಮಿಸುತ್ತಿದ್ದರು. ಮಹಾಲಿಂಗ ಭಟ್ ಅವರ ಮನೆಗೆ ಆಹಾರ ಸಾಮಾಗ್ರಿಗಳನ್ನು ಹಾಗೂ ಮತ್ತಿತರ ಸಾಮಾಗ್ರಿಗಳನ್ನು ಹೊತ್ತುಕೊಂಡು ಸಾಗಿ ಚಾರಣೀಗರಿಗೆ ಉಪಚಾರ ಮಾಡುತ್ತಿದ್ದರು.ಕಠಿಣ ಪರಿಸ್ಥಿತಿ ಇದ್ದರೂ ಚಾರಣೀಗರಲ್ಲಿ ಇವರು ಪ್ರೀತಿಯಿಂದ ಮಾತನಾಡುವ ಪರಿ ಇವರನ್ನು ಅವರು ಬೆಟ್ಟದಷ್ಟು ಪ್ರೀತಿಸುವಂತೆ ಮಾಡಿತ್ತು.
ಬೆಟ್ಟದಲ್ಲಿ ಬದುಕು ಕಟ್ಟಿಕೊಂಡವರು
ಮಹಾಲಿಂಗ ಭಟ್ ಅವರು ಮೂಲತಃ ಸುಬ್ರಹ್ಮಣ್ಯ ಸಮೀಪದ ನೂಚಿಲ ನಿವಾಸಿ. ಸುಮಾರು ೧೯೭೪ರಲ್ಲಿ ಇವರ ತಂದೆ ಪರಮೇಶ್ವರ ಭಟ್ ಗಿರಿಗದ್ದೆಗೆ ಬಂದು ನೆಲೆಸಿದರು.ಇವರೊಂದಿಗೆ ಮಹಾಲಿಂಗ ಭಟ್ ಸೇರಿದಂತೆ ಪರಮೇಶ್ವರ ಭಟ್ಟರ ಮಕ್ಕಳು ಇಲ್ಲಿ ನೆಲೆಸಿ ಕೃಷಿ ಕಾಯಕ ಆರಂಭಿಸಿದರು.ತಂದೆಯ ನಂತರ ಮಹಾಲಿಂಗ ಭಟ್ಟರು ಅಡಿಕೆ ತೋಟ, ದನ ಕರುಗಳ ಸಾಕಾಣೆ, ತರಕಾರಿ ಕೃಷಿ ಮುಂದುವರೆಸಿದರು. ಸುಬ್ರಹ್ಮಣ್ಯದಿಂದ ಸುಮಾರು ೬ ಕಿ.ಮೀ ದೂರದ ಕಾಲ್ನಡಿಗೆ ಹಾದಿಯ ಗಿರಿಗದ್ದೆಯಲ್ಲಿ ಮನೆ ಹೊಂದಿದ್ದ ಮಹಾಲಿಂಗ ಭಟ್ ಅವರು ಗಿರಿಗದ್ದೆ ಭಟ್ಟರು, ಅನ್ನದಾತ ಭಟ್ಟರು, ಬೆಟ್ಟದ ಜೀವ ಎಂದೇ ಹೆಸರುವಾಸಿಯಾಗಿದ್ದರು.