ಕೊಡಗು ವಿವಿ ಬೋಧಕೇತರ ಸಿಬ್ಬಂದಿಗಳ ಪ್ರತಿಭಟನೆ: ಕರ್ನಾಟಕ ಕಾವಲು ಪಡೆಯ ಬೆಂಬಲ

ಹೊಸದಿಗಂತ ವರದಿ ಕುಶಾಲನಗರ:

ಚಿಕ್ಕ ಅಳುವಾರದಲ್ಲಿರುವ ಕೊಡಗು ವಿಶ್ವವಿದ್ಯಾಲಯದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ತಾತ್ಕಾಲಿಕ ಬೋಧಕೇತರ ಸಿಬ್ಬಂದಿಗಳ ಸೇವೆಯನ್ನು ಮುಂದುವರೆಸುವಂತೆ ಒತ್ತಾಯಿಸಿ ಕೇಂದ್ರದ ಹೊರ ಆವರಣದಲ್ಲಿ 24 ಬೋಧಕೇತರ ಸಿಬ್ಬಂದಿಗಳು ಪ್ರತಿಭಟನೆ ನಡೆಸುತ್ತಿದ್ದು, ಜಿಲ್ಲಾ ಕರ್ನಾಟಕ ಕಾವಲು ಪಡೆಯೂ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದೆ.

ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿದ್ದಾಗದಿಂದ, ಸ್ನಾತಕೋತ್ತರ ಕೇಂದ್ರ ಆರಂಭವಾದಾಗಿನಿಂದಲೂ ಸೇವೆಯಲ್ಲಿದ್ದ 24 ಮಂದಿ ಸಿಬ್ಬಂದಿಗಳನ್ನು ಸೇವೆಯಿಂದ ಕೈಬಿಡಲಾಗಿದೆ. ಇದರಿಂದಾಗಿ ಬೋಧಕೇತರರಿಗೆ ಭಾರೀ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ಸ್ನಾತಕೋತ್ತರ ಕೇಂದ್ರದ 44 ಮಂದಿ ಬೋಧಕೇತರ ಸಿಬ್ಬಂದಿಗಳ ಪೈಕಿ 18 ಮಂದಿಯನ್ನು ‌ಮಾತ್ರ ಸೇವೆಯಲ್ಲಿ ಮುಂದುವರೆಸಿದ್ದು, ಕಳೆದ 8-10 ವರ್ಷಗಳಿಂದ ಕೇಂದ್ರದ ಅಭಿವೃದ್ಧಿಗೆ ಶ್ರಮಿಸಿದ, ಎಲ್ಲಾ ಅರ್ಹತೆ ಹೊಂದಿರುವ ಸಿಬ್ಬಂದಿಗಳನ್ನು ಕೈಬಿಡಲಾಗಿದೆ. ಇದು ಸರಿಯಾದ ಕ್ರಮವಲ್ಲಾ ಎಂದು ಪ್ರತಿಭಟನೆ ನಿರತರೊಂದಿಗೆ ಭಾಗವಹಿಸಿದ್ದ ಕರ್ನಾಟಕ ಕಾವಲು ಪಡೆಯ ಜಿಲ್ಲಾಧ್ಯಕ್ಷ ಎಂ. ಕೃಷ್ಣ ತಿಳಿಸಿದರು.

ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಕಾವಲು ಪಡೆಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಇಂದಿರಾ, ಯುವ ಘಟಕದ ಅಧ್ಯಕ್ಷ ಸಮೀರ್, ಸಮಿತಿಯ ಗಣೇಶ್, ಆಲಿ, ಪ್ರತಿಭಟನಾ ನಿರತ ಬೋಧಕೇತರ ಸಿಬ್ಬಂದಿಗಳಾದ ಸವಿತಾ ರಾಣಿ, ಕೆ.ಜೆ.ಹರೀಶ್, ಎ.ಆರ್.ಗಣೇಶ್, ಯೋಗೇಶ್ ಮತ್ತಿತರರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!