ಉಪರಾಷ್ಟ್ರಪತಿಗಳ ಅವಹೇಳನ ಮಾಡಿದ ಕಾಂಗ್ರೆಸ್: ಟಿಎಂಸಿ ಸಂಸದರ ವಿರುದ್ಧ ಬಿಜೆಪಿ ಪ್ರತಿಭಟನೆ

ಹೊಸ ದಿಗಂತ ವರದಿ, ಮೈಸೂರು:

ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಕಾಂಗ್ರೇಸ್ ಸಂಸದ ರಾಹುಲ್ ಗಾಂಧಿ ಹಾಗೂ ಟಿಎಂಸಿ ಸಂಸದರು ವೈಯಕ್ತಿಕ ವಾಗಿ ಅಣಕಿಸಿ ಅವಮಾನಿಸಿರುವುದ್ದನ್ನು ಖಂಡಿಸಿ ನಗರದಲ್ಲಿ ಗುರುವಾರ ಬಿಜೆಪಿವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಕೆಲಕಾಲ ಕಾಂಗ್ರೆಸ್ ಹಾಗೂ ಟಿಎಂಸಿ ಸಂಸದರ ವಿರುದ್ಧ ನಾನಾ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಕಾಂಗ್ರೆಸ್ ನಾಯಕರ ಇತ್ತೀಚಿನ ವರ್ತನೆಗಳನ್ನು ನೋಡಿದರೆ ಬೇಸರವಾಗುತ್ತದೆ. ಕಾಂಗ್ರೆಸ್ ನಾಯಕರಿಗೆ ಸಾಂವಿಧಾನ ಹುದ್ದೆಗಳ ಮೇಲೆ ಗೌರವವಿಲ್ಲ. ಹೀಗಾಗಿಯೇ ಅವರು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ವೈಯಕ್ತಿಕವಾಗಿ ಅಣಕಿಸಿ ಅವಮಾನಿಸಿದ್ದಾರೆ. ಕರ್ನಾಟಕದ ರಾಜ್ಯದ ಮಂತ್ರಿಯೊಬ್ಬರು ತೆಲಂಗಾಣದ ಚುನಾವಣಾ ಪ್ರಚಾರಕ್ಕೆ ಹೋಗಿದ್ದ ವೇಳೆ ವಿಧಾನಸಭೆಯ ಸ್ಪೀಕರ್ ಸ್ಥಾನ ಒಂದು, ಜಾತಿ, ಧರ್ಮಕ್ಕೆ ಸೇರಿದ್ದು ಎಂಬಂತೆ ಮಾತನಾಡಿ ಅವಮಾನಿಸಿದ್ದಾರೆ.

ಸಾಂವಿಧಾನಿಕ ಹುದ್ದೆಗಳನ್ನು ಪದೇಪದೇ ಗೇಲಿ ಮಾಡುತ್ತಿದ್ದಾರೆ. ಅಣಕಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರ ಸಮರ್ಪಕ ಆಡಳಿತ ನಡೆಸುವಲ್ಲಿ ವಿಫಲವಾಗುತ್ತಿದೆ. ಸರ್ಕಾರದ ಮುಖ್ಯಸ್ಥರು ಆತಂರಿಕ ಕಚ್ಚಾಟ, ಖುರ್ಚಿ ಉಳಿಸಿಕೊಳ್ಳುವದರಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ. ಇದರಿಂದಾಗಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಮಂಡ್ಯದ ಆಲಮನೆಯಲ್ಲಿ ನೂರಾರು ಹೆಣ್ಣು ಭ್ರೂಣಗಳ ಹತ್ಯೆ ನಡೆದಿದೆ. ಹೀಗಿದ್ದರೂ ಆ ಆಲೆಮನೆಯನ್ನು ಸೀಜ್ ಮಾಡಿಲ್ಲ. ಆರೋಪಿಗಳನ್ನು ಬಂಧಿಸಿಲ್ಲ. ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿನ ಅನೇಕ ಕ್ಲಿನಿಕ್‌ಗಳಲ್ಲಿ ಇನ್ನೂ ಕೂಡ ಹೆಣ್ಣು ಭ್ರೂಣ ಪತ್ತೆ, ಹತ್ಯೆಗಳು ನಡೆಯುತ್ತಿದ್ದರೂ, ಸಂಬಂಧಿಸಿದರ ವಿರುದ್ಧ ಕಠಿಣವಾದ ಕಾನೂನು ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಬೆಳಗಾವಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬರನ್ನು ವಿಸ್ತ್ರಗೊಳಿಸಿ, ಹಲ್ಲೆ ನಡೆಸಲಾಗಿದೆ. ರಾಜ್ಯ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ, ನ್ಯಾಯಾಧೀಶರೇ ಘಟನೆ ಸಂಬoಧ ಸುಮೋಟೋ ಕೇಸ್ ದಾಖಲಿಸಿಕೊಂಡು, ಮಧ್ಯ ಪ್ರವೇಶ ಮಾಡಿದ ಬಳಿಕವೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ, ತಪ್ಪಿತಸ್ಥರ ವಿರುದ್ಧ ಯಾವುದೇ ಕಠಿಣ ಕ್ರಮಗಳನ್ನು ಜರುಗಿಸಿಲ್ಲ ಎಂದು ದೂರಿದರು.

ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇoದ್ರ, ಮಾಜಿ ಮುಡಾ ಅಧ್ಯಕ್ಷ ಯಶಸ್ವಿಸೋಮಶೇಖರ್, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಜಿ.ಗಿರಿಧರ್, ವಾಣೀಶ್ ಕುಮಾರ್, ಮೈಸೂರು ಮಹಾನಗರಪಾಲಿಕೆಯ ಮಾಜಿ ಮೇಯರ್ ಶಿವಕುಮಾರ್, ಮಾಜಿ ಶಾಸಕ ಎಲ್.ನಾಗೇಂದ್ರ, ಚಿತ್ರ ನಟ ಎಸ್.ಜಯಪ್ರಕಾಶ್ (ಜೆಪಿ), ಮಂಜುಳಾ, ಎಸ್ಟಿ ಮೋರ್ಚಾದ ಡಿ.ಮಹೇಶ್ ನಾಯಕ, ಸಂತೋಷ್ ಕುಮಾರ್, ಒಬಿಸಿ ಅಧ್ಯಕ್ಷ ಜೋಗಿ ಮಂಜು, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಿರ್ಲೇ ಶ್ರೀನಿವಾಸಗೌಡ, ಎಸ್.ಆರ್.ಗೋಪಾಲ್‌ರಾವ್, ಮುಡಾ ಮಾಜಿ ಸದಸ್ಯ ಲಕ್ಷ್ಮೀದೇವಿ, ಮಾಜಿ ಮೇಯರ್ ಸಂದೇಶ್ ಸ್ವಾಮಿ, ಮಾಜಿ ಸದಸ್ಯ ಸತೀಶ್, ಗೆಜ್ಜಹಳ್ಳಿ ಮಹೇಶ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!