ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ವಿಭಾಗದಲ್ಲಿ ಪಾರಂಪರಿಕ ರೈಲು ನಿಲ್ದಾಣಗಳ ಜೀರ್ಣೋದ್ಧಾರ ಕಾರ್ಯ ಆರಂಭಿಸಲಾಗುತ್ತಿದೆ. ಬೆಂಗಳೂರು ವಿಭಾಗಕ್ಕೆ ಸೇರುವ ದೊಡ್ಡಜಾಲ, ದೇವನಹಳ್ಳಿ, ಆವತಿಹಳ್ಳಿ, ನಂದಿ ಹಾಲ್, ಚಿಕ್ಕಬಳ್ಳಾಪುರ, ಚಿಂತಮಣಿ, ಕೋಲಾರ, ಕೋರಮಂಡಲ್, ಊರ್ಗಾಂವ್ ಮತ್ತು ಬಿಇಎಂಎಲ್ ಗಳಂತಹ ಹಲವಾರು ಪಾರಂಪರಿಕ ರೈಲು ನಿಲ್ದಾಣಗಳನ್ನು ಜೀರ್ಣೋದ್ದಾರ ಹಾಗೂ ಸಂರಕ್ಷಣೆಗಾಗಿ ಗುರುತಿಸಿದೆ.
ಮೊದಲ ಹಂತದಲ್ಲಿ, ಬೆಂಗಳೂರು-ಚಿಕ್ಕಬಳ್ಳಾಪುರ-ಕೋಲಾರ ಲಘು ರೈಲು ಮಾರ್ಗದ ದೊಡ್ಡಜಾಲ, ದೇವನಹಳ್ಳಿ, ಅವತಿಹಳ್ಳಿ ಮತ್ತು ನಂದಿ ಹಾಲ್ಟ್ ಎಂಬ 04 ನಿಲ್ದಾಣಗಳನ್ನು ಜೀರ್ಣೋದ್ಧಾರಕ್ಕಾಗಿ ಆಯ್ಕೆ ಮಾಡಲಾಗಿದೆ. ಐತಿಹಾಸಿಕವಾಗಿ, ಈ ಮಾರ್ಗವು 1908 ರಲ್ಲಿ ಮದ್ರಾಸ್ ಮತ್ತು ದಕ್ಷಿಣ ಮರಾಠಾ ರೈಲ್ವೇ ಕಂಪನಿಯೊಂದಿಗೆ ಪೂರಕ ಒಪ್ಪಂದದೊಂದಿಗೆ ರಾಜ್ಯದಿಂದ ಖಾತರಿಯಡಿಯಲ್ಲಿ ಖಾಸಗಿ ಉದ್ಯಮದಿಂದ ಕರ್ನಾಟಕ ರಾಜ್ಯದಲ್ಲಿ ಪ್ರಾರಂಭಿಸಿದ ಮೊದಲ ರೈಲ್ವೆಯಾಗಿದೆ.
107 ವರ್ಷಗಳ ಇತಿಹಾಸ :
107 ವರ್ಷಗಳ ಹಿಂದೆ ನಿರ್ಮಿಸಲಾದ ಈ ನಿಲ್ದಾಣಗಳು ಪ್ರದೇಶದ ಗತಕಾಲವನ್ನು ಹೇಳುತ್ತವೆ. ಇವುಗಳ ಸಾಂಪ್ರದಾಯಿಕ ರಚನೆಗಳು ಪ್ರವಾಸಿಗರಿಗೆ ಸುತ್ತಮುತ್ತಲಿನ ನೈಸರ್ಗಿಕ ಸೌಂದರ್ಯವನ್ನು ಅನಾವರಣಗೊಳಿಸುವುದಲ್ಲದೆ ಸ್ಥಳೀಯ ಇತಿಹಾಸದ ಒಳನೋಟವನ್ನೂ ನೀಡುತ್ತವೆ. ಈ ಸ್ಟೇಷನ್ ಕಟ್ಟಡಗಳ ಹೈಬ್ರಿಡ್ ವಾಸ್ತುಶೈಲಿಯು ಹಳೆಯ ಮೈಸೂರು ಪ್ರದೇಶದಲ್ಲಿನ ಅನೇಕ ವಿಂಟೇಜ್ ರೈಲ್ವೆ ನಿಲ್ದಾಣಗಳನ್ನು ಹೋಲುತ್ತದೆ. ಇದನ್ನು ವಸಾಹತುಶಾಹಿ ಅವಧಿಯಲ್ಲಿ ಮೈಸೂರು ರಾಜ್ಯವು ನಿರ್ಮಿಸಿತು. ನಂತರ ಹೆಚ್ಚುವರಿಯಾಗಿ ವಿಸ್ತರಿಸಲಾದ ನಂದಿ ರೈಲ್ವೇ ನಿಲ್ದಾಣವನ್ನು ಹೊರತುಪಡಿಸಿ, ಈ ನಿಲ್ದಾಣಗಳ ಕಟ್ಟಡಗಳು ಒಂದೇ ರೀತಿಯ ವಾಸ್ತುಶಿಲ್ಪದ ವಿನ್ಯಾಸವನ್ನು ಹೊಂದಿವೆ.
ಸ್ಥಳೀಯ ವಾಸ್ತುಶೈಲಿ:
ಈ ರಚನೆಗಳು ವಸಾಹತುಶಾಹಿ ವಾಸ್ತುಶಿಲ್ಪ ಮತ್ತು ಸ್ಥಳೀಯ ವಾಸ್ತುಶೈಲಿಯ ಉತ್ತಮ ಮಿಶ್ರಣವನ್ನು ಹೊಂದಿವೆ. ಈ ಕಟ್ಟಡಗಳ ಕೇಂದ್ರಗಳ ಮುಖ್ಯ ರಚನೆಯು ನಾಲ್ಕು ಪಾರ್ಶ್ವಗಳ ಮಂಗಳೂರು ಹೆಂಚಿನ ಗೇಬಲ್ ಛಾವಣಿಯನ್ನು ಹೊಂದಿದ್ದು ಪ್ರತಿ ಗೇಬಲ್ ವೃತ್ತಾಕಾರದ ಗಾಜಿನ ಕಿಟಕಿಯನ್ನು ಹೊಂದಿದೆ. ಮುಖ್ಯ ರಚನೆಯಲ್ಲಿ ಕಂಡುಬರುವ ಸಣ್ಣ ಪಡಸಾಲೆ ಮತ್ತು ಸ್ಥಳೀಯ ಕಡಪ ಕಲ್ಲಿನ ನೆಲಹಾಸು ದೇಶೀಯ ವಾಸ್ತುಶಿಲ್ಪದ ಪ್ರಭಾವವನ್ನು ಪ್ರತಿಬಿಂಬಿಸುತ್ತವೆ.
ಸ್ಥಳೀಯ ಆರ್ಥಿಕತೆಗೆ ಮುನ್ನಡೆ:
ಅಗಾಧವಾದ ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಹೊಂದಿರುವ ಈ ಕಟ್ಟಡಗಳು ಸಂರಕ್ಷಣೆಗೆ ಯೋಗ್ಯವಾಗಿದ್ದು ಇಂದಿನ ಮತ್ತು ಮುಂದಿನ ಪೀಳಿಗೆಗೆ ಹಿಂದಿನ ತಲೆಮಾರುಗಳ ಭೌತಿಕ ಅಭಿವ್ಯಕ್ತಿಯನ್ನು ಅನುಭವಿಸಲು ಮತ್ತು ಪ್ರಯೋಜನವನ್ನು ಪಡೆಯಲು ಅನುವು ಮಾಡಿಕೊಡುತ್ತವೆ. ಬೆಂಗಳೂರು ವಿಭಾಗವು ವಸಾಹತುಶಾಹಿ ಕಾಲದ ಸ್ಟೇಷನ್ ಕಟ್ಟಡಗಳ ಮರುಸ್ಥಾಪನೆ ಪ್ರಕ್ರಿಯೆಯಲ್ಲಿ ಸೂಕ್ತ ವಿಧಾನಗಳು ಮತ್ತು ಸಾಮಗ್ರಿಗಳನ್ನು ಬಳಸಿಕೊಂಡು, ಕಟ್ಟಡಗಳ ಸಮಗ್ರತೆಯನ್ನು ಕಾಪಾಡಿ ಅವುಗಳ ನಿರಂತರ ಮರುಬಳಕೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಹೊಸತನವನ್ನು ಕಲ್ಪಿಸಲು ಹೆಮ್ಮೆಪಡುತ್ತದೆ. ಇದು ನಗರ ಪರಂಪರೆಯ ಸಂರಕ್ಷಣೆಗೆ ಹಲವಾರು ಪ್ರಮುಖ ಆರ್ಥಿಕ ಪ್ರಯೋಜನಗಳನ್ನು ನೀಡುತ್ತದೆ ಮತ್ತು ಸ್ಥಳೀಯ ಆರ್ಥಿಕತೆಗೆ ಮುನ್ನಡೆಯನ್ನು ಹಾಗೂ ಈ ಪ್ರದೇಶಕ್ಕೆ ಪ್ರವಾಸೋದ್ಯಮವನ್ನು ಪರಿಚಯಿಸಲು ಸಹಾಯಕವಾಗಿದೆ.
100 ವರ್ಷ ಹಳೆಯ ಕಟ್ಟಡ:
ಎಲ್ಲಾ ನಾಲ್ಕು ನಿಲ್ದಾಣದ ಕಟ್ಟಡಗಳು ಒಂದು ಹಾಲ್, ಒಂದು ಸಣ್ಣ ಶೇಖರಣಾ ಕೊಠಡಿ ಮತ್ತು ಸುತ್ತ ಪಡಸಾಲೆಯನ್ನು ಒಳಗೊಂಡಿವೆ. ನಂದಿ ಹಾಲ್ಟ್ ವಿಸ್ತೀರ್ಣದಲ್ಲಿ ದೊಡ್ಡದಾಗಿದ್ದು ನಂದಿ ಬೆಟ್ಟಕ್ಕೆ ಅಭಿಮುಖವಾಗಿರುವ ಮೈದಾನದ ಮಧ್ಯದಲ್ಲಿ ಸ್ಥಾಪಿತವಾಗಿದ್ದು ಮೂರು ಸಭಾಂಗಣಗಳನ್ನು ಒಳಗೊಂಡಿದೆ. ಸುಣ್ಣದ ಗಾರೆ ಮತ್ತು ಕಡಪ ಕಲ್ಲುಗಳು ಸೇರಿದಂತೆ ಮಂಗಳೂರು ಹೆಂಚುಗಳಂತಹ ನಿರ್ಮಾಣಕ್ಕೆ ಬಳಸಿರುವ ವಸ್ತುಗಳು ಸ್ಥಳೀಯ ಮೂಲದ್ದಾಗಿವೆ. ಕಟ್ಟಡವು 100 ವರ್ಷಗಳನ್ನು ಹಳೆಯದಾಗಿದ್ದು, ಸವಕಳಿಯಾಗಿ ಶಿಥಿಲಗೊಂಡಿದ್ದು, ಮೇಲಾವಣಿಯ ಹೆಂಚುಗಳು ಅಸ್ತವ್ಯಸ್ತವಾಗಿರುವ ಕಾರಣ ಕಟ್ಟಡದಲ್ಲಿ ಬಿರುಕುಗಳು ಉಂಟಾಗಿವೆ. ತೇವದಿಂದಾಗಿ ಕೆಲವು ತೀರುಗಳು ಕೆಟ್ಟು ಸ್ಥಿತಿಯಲ್ಲಿವೆ. ಆದ್ದರಿಂದ ಅವುಗಳನ್ನು ಬದಲಾಯಿಸುವ ಬದಲು ರಚನಾತ್ಮಕವಾಗಿ ಬಲಪಡಿಸಲು ಗಮನ ಹರಿಸಲಾಗಿದೆ. ಈ ಕ್ಷೇತ್ರದಲ್ಲಿ ಲಭ್ಯವಿರುವ ಪರಿಣತಿಯು ಸೀಮಿತವಾಗಿರುವುದರಿಂದ ಮೂಲ ರಚನೆಗಳ ಸ್ವಂತಿಕೆಗೆ ಹಾನಿಯಾಗದಂತೆ ಹಳೆಯ ರಚನಾ ಶೈಲಿಯನ್ನು ಮರುಸ್ಥಾಪಿಸುವುದು ಸವಾಲಿನ ಕಾರ್ಯವಾಗಿತ್ತು. ಕಟ್ಟಡದ ಗುಣಲಕ್ಷಣಗಳನ್ನು ಹಾಗೇ ಉಳಿಸಿಕೊಳ್ಳುವುದು ಅಷ್ಟೇ ಕಷ್ಟದ ಕೆಲಸವಾಗಿತ್ತು.
ಇನ್ನಾಕ್ ಸಂಸ್ಥೆಯ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ:
ಆದ್ದರಿಂದ, ಮೇಲಿನ ಕೆಲಸವನ್ನು ಕೈಗೊಳ್ಳಬಹುದಾದ ಸಂಸ್ಥೆಯನ್ನು ಹುಡುಕಲು ಗಹನವಾಗಿ ಪಯತ್ನಿಸಲಾಯಿತು. ನಾವು ಭಾರತದಲ್ಲಿ ಪರಂಪರೆಯ ಅರಿವು ಮೂಡಿಸಲು ಮತ್ತು ಸಂರಕ್ಷಣೆಯನ್ನು ಉತ್ತೇಜಿಸಿ ಮುನ್ನಡಿಸುವ ಕಾರ್ಯದಲ್ಲಿ ಪ್ರವೃತ್ತವಾಗಿರುವ ಸಂಸ್ಥೆಯಾದ ಭಾರತೀಯ ರಾಷ್ಟ್ರೀಯ ಪರಂಪರೆ ಮತ್ತು ಸಂಸ್ಕೃತಿ ಟ್ರಸ್ಟ್ (ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಮರಲ್ ಹೆರಿಟೇಜ್ -ಇನ್ಮಾಕ್), ಬೆಂಗಳೂರು ಶಾಖೆಯನ್ನು ಸಂಪರ್ಕಿಸಿದೆವು. ಇನ್ನಾಕ್ ಸಂಸ್ಥೆಯು ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ. (Corporate Social Responsibility) ನಿಧಿಯ ಸಹಾಯದಿಂದ ಪಾರಂಪರಿಕ ತಾಣಗಳ ಮರುಸ್ಥಾಪನೆ ಮತ್ತು ಸಂರಕ್ಷಣೆಯನ್ನು ಕೈಗೊಳ್ಳಲು ಆಸಕ್ತಿ ವ್ಯಕ್ತಪಡಿಸಿತು.
ಚಿಕ್ಕಬಳ್ಳಾಪುರದವರೆಗೆ ವಿಸ್ತರಣೆ :
ಕೆಐಎಡಿ ಹಾಲ್ಟ್ ನಿಲ್ದಾಣದವರೆಗೆ ಓಡುತ್ತಿದ್ದ ರೈಲು ಸಂಖ್ಯೆ.06531/06532, 06535/06536 ಮತ್ತು 06593/06594 ಅನ್ನು 11.12.2023 ರಿಂದ ಚಿಕ್ಕಬಳ್ಳಾಪುರದವರೆಗೆ ವಿಸ್ತರಿಸಲಾಗಿದೆ. ಈ ರೈಲುಗಳಿಗೆ ದೊಡ್ಡಜಾಲ, ದೇವನಹಳ್ಳಿ, ಆವತಿಹಳ್ಳಿ ಮತ್ತು ನಂದಿ ಹಾಲ್ಟ್ ರೈಲು ನಿಲ್ದಾಣಗಳಲ್ಲಿ ನಿಲುಗಡೆಯನ್ನು ಒದಗಿಸಲಾಗಿದ್ದು, ಇವುಗಳನ್ನು ಪಾರಂಪರಿಕ ನಿಲ್ದಾಣಗಳಾಗಿ ಅಭಿವೃದ್ಧಿಪಡಿಸಲಾಗಿದೆ. ದೇವನಹಳ್ಳಿ ಮತ್ತು ನಂದಿ ಹಾಲ್ಟ್ ಸ್ಟೇಷನ್‌ಗಳ ಸುತ್ತಲೂ ಪ್ರವಾಸಿ ಆಕರ್ಷಣೆ ಮತ್ತು ಐತಿಹಾಸಿಕ ಪ್ರಾಮುಖ್ಯತೆಯ ಸ್ಥಳಗಳಿವೆ. ಈ ನಿಲ್ದಾಣಗಳ ಸಮೀಪವಿರುವ ನಂದಿಹಿಲ್, ಭೋಗ ನಂದೀಶ್ವರ ದೇವಸ್ಥಾನ ಹೈದರಾಲಿ ಕೋಟೆ, ಸೋಮೇಶ್ವರ ದೇವಸ್ಥಾನ ಮುಂತಾದ ಸ್ಥಳಗಳಿಗೆ ಭೇಟಿ ನೀಡುವ ಅನೇಕ ಜನರು ಮೇಲಿನ ರೈಲುಗಳಲ್ಲಿ ಪ್ರಯಾಣಿಸಬಹುದು. ಈ ಸ್ಥಳಗಳಲ್ಲಿ ಮತ್ತು ಸುತ್ತಮುತ್ತಲಿನ ವಿದ್ಯಾರ್ಥಿಗಳು ಮತ್ತು ಕೆಲಸಗಾರರಿಗೆ ರೈಲುಗಳು ಉಪಯುಕ್ತವಾಗಿವೆ.
ಜೀರ್ಣೋದ್ಧಾರ ಕಾರ್ಯದ ಎಲ್ಲಾ ಅಂಶಗಳು ನಿಖರವಾಗಿರುದು ಮುಂದಿನ ತಲೆಮಾರು ಭವ್ಯ ಪುರಾತನ ವಾಸ್ತುಶಿಲ್ಪದ ಶ್ರೀಮಂತ ಪರಂಪರೆಯ ಸೊಬಗನ್ನು ಪ್ರಶಂಸಿಸಲು ಈ ಪಾರಂಪರಿಕ ಕಟ್ಟಡಗಳು ಅನಂತವಾಗಿ ಎದ್ದು ನಿಲ್ಲಲಿವೆ.