ಹೊಸದಿಗಂತ ವರದಿ ಬೆಳಗಾವಿ:
ಎಥೆನಾಲ್ ಉತ್ಪಾದನೆಗೆ ಹಾಗೂ ಸಕ್ಕರೆ ರಫ್ತಿಗೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿರುವ ಪರಿಣಾಮ ಕಾರ್ಖಾನೆಗಳಿಗೆ ಬಹಳಷ್ಟು ಸಮಸ್ಯೆ ಆಗಿದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಕೇಂದ್ರ ಸರ್ಕಾರ ಮೊದಲು ಎಥೆನಾಲ್ ಉತ್ಪಾದನೆಗೆ ಅನುಮತಿ ಕೊಟ್ಟ ನಂತರ ಕಾರ್ಖಾನೆಯವರು ನೂರಾರು ಕೋಟಿ ರೂ. ವೆಚ್ಚ ಮಾಡಿ ಕಾರ್ಖಾನೆ ಅಭಿವೃದ್ಧಿಪಡಿಸಿದರು. ಆದರೆ ಈಗ ಕೇಂದ್ರ ಸರಕಾರ ನಿರ್ಬಂಧ ಹೇರಿರುವ ಪರಿಣಾಮ ಕಾರ್ಖಾನೆಯವರು ಆತಂಕ ಎದುರಿಸುವಂತಾಗಿದೆ ಎಂದರು.
ಸಕ್ಕರೆ ರಫ್ತಿಗೂ ನಿರ್ಬಂಧ ಹೇರಿರುವುದರಿಂದ ಕಾರ್ಖಾನೆಗಳು ಆರ್ಥಿಕ ಸಮಸ್ಯೆ ಎದುರಿಸುವಂತಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಪುನರ್ ಪರಿಶೀಲಿಸಬೇಕೆಂದು ಹೇಳಿದರು.
ಖಾನಾಪುರ ತಾಲೂಕಿನ ಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆಯಲ್ಲಿ ಅವ್ಯವಹಾರ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿದೆ. ಈಗಾಗಲೇ ತನಿಖೆಯೂ ಆರಂಭವಾಗಿದೆ ಎಂದ ಸಚಿವ ಶಿವಾನಂದ ಪಾಟೀಲ, ಎಪಿಎಂಸಿ ಕಾಯ್ದೆ ಹಿಂಪಡೆಯುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆದಿದೆ ಎಂದು ಹೇಳಿದರು.