ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್‌ಐ)ದ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಆಪ್ತ ಸಂಜಯ್ ಸಿಂಗ್, ಡಬ್ಲ್ಯುಎಫ್ಐನ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಬೆನ್ನಲ್ಲೇ ಕುಸ್ತಿಪಟುಗಳ ಅಸಮಾಧಾನ ಹೆಚ್ಚಾಗಿದೆ.
ನಿನ್ನೆಯಷ್ಟೇ ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲ್ಲಿಕ್ ಕ್ರೀಡೆಯನ್ನು ತೊರೆಯುವುದಾಗಿ ಘೋಷಿಸಿದರು. ಇದೀಗ ಮತ್ತೊಬ್ಬ ಪದಕ ವಿಜೇತ ಬಜರಂಗ್ ಪೂನಿಯಾ ಅವರು ಪದ್ಮಶ್ರೀ ಪ್ರಶಸ್ತಿಯನ್ನು ಹಿಂತಿರುಗಿಸುವುದಾಗಿ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರಿಗೆ ಸುದೀರ್ಘ ಪತ್ರವೊಂದನ್ನು ಬರೆದಿರುವ ಬಜರಂಗ್ ಪೂನಿಯಾ, ಆತ್ಮೀಯ ಪ್ರಧಾನಿ ಜೀ, ನಿಮ್ಮ ಆರೋಗ್ಯ ಚೆನ್ನಾಗಿದೆ ಎಂದು ಭಾವಿಸುತ್ತೇನೆ. ನೀವು ಸಾಕಷ್ಟು ಕೆಲಸಗಳಲ್ಲಿ ಬಿಜಿಯಾಗಿರುತ್ತೀರಿ ಆದರೆ, ದೇಶದಲ್ಲಿ ಕುಸ್ತಿಪಟುಗಳಿಗೆ ಏನಾಗುತ್ತಿದೆ ಎಂಬುದರ ಮೇಲೆ ನಿಮ್ಮ ಗಮನವನ್ನು ಸೆಳೆಯಲು ನಾನು ಈ ಪತ್ರವನ್ನು ಬರೆದಿದ್ದೇನೆ. ಈ ವರ್ಷದ ಜನರಿಯಲ್ಲಿ ಮಹಿಳಾ ಕುಸ್ತಿಪಟುಗಳು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸಿದ್ದು ಮತ್ತು ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದು ನಿಮಗೆ ತಿಳಿದಿರುತ್ತದೆ. ನಾನು ಕೂಡ ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೆ. ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ ಬಳಿಕ ನಾವು ಪ್ರತಿಭಟನೆಯನ್ನು ಕೈಬಿಟ್ಟೆವು ಎಂದು ಬಜರಂಗ್ ಪೂನಿಯಾ ಹೇಳಿದ್ದಾರೆ.
ಘಟನೆ ನಡೆದ ಮೂರು ತಿಂಗಳಾದರೂ ಬ್ರಿಜ್ ಭೂಷಣ್ ವಿರುದ್ಧ ಎಫ್ಐಆರ್ ದಾಖಲಾಗಲಿಲ್ಲ. ನಂತರ ನಾವು ಏಪ್ರಿಲ್ ತಿಂಗಳಲ್ಲಿ ಬೀದಿಗೆ ಇಳಿದೆವು. ಇದಾದ ಬಳಿಕ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದರು. ಜನವರಿಯಲ್ಲಿ ಬ್ರಿಜ್ ವಿರುದ್ಧ 19 ದೂರುಗಳು ದಾಖಲಾಗಿದ್ದವು. ಆ ಸಂಖ್ಯೆ ಏಪ್ರಿಲ್ ಹೊತ್ತಿಗೆ 7ಕ್ಕೆ ಇಳಿಯಿತು. ಈ ಸಮಯದಲ್ಲಿ ಬ್ರಿಜ್ ಅವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು 12 ಪ್ರತಿಭಟನಾಕಾರರು ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಮಾಡಿದರು.
ನಮ್ಮ ಪ್ರತಿಭಟನೆ 40 ದಿನಗಳ ಕಾಲ ನಡೆಯಿತು. ಆ ದಿನಗಳಲ್ಲಿ ನಮ್ಮ ಮೇಲೆ ಹೆಚ್ಚಿನ ಒತ್ತಡವಿತ್ತು. ನಾವು ಗಂಗಾ ನದಿಗೆ ನಮ್ಮ ಪದಕಗಳನ್ನು ಮುಳುಗಿಸಲು ಹೋದೆವು. ಆಗ ನಮ್ಮನ್ನು ರೈತ ಮುಖಂಡರು ತಡೆದರು. ಆ ಸಮಯದಲ್ಲಿ ನಿಮ್ಮ ಸಂಪುಟದ ಜವಾಬ್ದಾರಿಯುತ ಮಂತ್ರಿಯೊಬ್ಬರು ಕರೆ ಮಾಡಿದರು. ನಮಗೆ ನ್ಯಾಯದ ಭರವಸೆ ನೀಡಿದರು. ಈ ಮಧ್ಯೆ, ನಾವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದೆವು ಅವರು ಸಹ ನಮಗೆ ನ್ಯಾಯದ ಭರವಸೆ ನೀಡಿದರು. ಬಳಿಕ ನಾವು ನಮ್ಮ ಪ್ರತಿಭಟನೆಯನ್ನು ನಿಲ್ಲಿಸಿದೆವು. ಆದರೆ, ಡಿಸೆಂಬರ್ 21 ರಂದು ನಡೆದ ಡಬ್ಲ್ಯುಎಫ್‌ಐ ಚುನಾವಣೆಯಲ್ಲಿ ಬ್ರಿಜ್ ಭೂಷಣ್ ಅವರ ಆಪ್ತ ಸಂಜಯ್ ಸಿಂಗ್ ಗೆಲುವು ದಾಖಲಿಸಿದ್ದು, ಕುಸ್ತಿ ಒಕ್ಕೂಟದಲ್ಲಿ ಬ್ರಿಜ್ ಭೂಷಣ್ ಮತ್ತೊಮ್ಮೆ ಮೇಲುಗೈ ಸಾಧಿಸಿದ್ದಾರೆ. ಇದರಿಂದ ತೀವ್ರ ಒತ್ತಡಕ್ಕೆ ಒಳಗಾದ ಸಾಕ್ಷಿ ಮಲಿಕ್ ಕುಸ್ತಿಯಿಂದ ನಿವೃತ್ತಿ ಘೋಷಿಸಿದ್ದಾರೆ.
ನಾವೆಲ್ಲರೂ ರಾತ್ರಿಯಿಡೀ ಕಣ್ಣೀರಿನಲ್ಲಿ ಕಳೆದಿದ್ದೇವೆ. ಏನು ಮಾಡಬೇಕು? ಎಲ್ಲಿಗೆ ಹೋಗಬೇಕು? ಎಂದು ನಮಗೆ ಅರ್ಥವಾಗಲಿಲ್ಲ. ಸರ್ಕಾರ ನಮಗೆ ಸಾಕಷ್ಟನ್ನು ನೀಡಿದೆ. 2019ರಲ್ಲಿ ನನಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿತು. ಅಲ್ಲದೆ, ಅರ್ಜುನ ಮತ್ತು ಖೇಲ್ ರತ್ನ ಪ್ರಶಸ್ತಿಯನ್ನು ಸಹ ಸ್ವೀಕರಿಸಿದ್ದೇನೆ. ನಾನು ಈ ಪ್ರಶಸ್ತಿಗಳನ್ನು ಪಡೆದಾಗ ತುಂಬಾ ಸಂತೋಷಗೊಂಡಿದ್ದೆ. ಆದರೆ, ಇಂದು ದುಃಖವು ಹೆಚ್ಚು ಭಾರವಾಗಿದೆ. ಅದಕ್ಕೆ ಕಾರಣ ಮಹಿಳಾ ಕುಸ್ತಿಪಟು ಭದ್ರತೆ ಭಯದಿಂದ ಕ್ರೀಡೆಯನ್ನು ತೊರೆದಿರುವುದು. ಕ್ರೀಡೆಯು ನಮ್ಮ ಮಹಿಳಾ ಕ್ರೀಡಾಪಟುಗಳನ್ನು ಸಬಲಗೊಳಿಸಿದೆ ಮತ್ತು ಅವರ ಜೀವನವನ್ನು ಬದಲಾಯಿಸಿದೆ. ಈ ಎಲ್ಲ ಶ್ರೇಯಸ್ಸು ಮೊದಲ ತಲೆಮಾರಿನ ಮಹಿಳಾ ಕ್ರೀಡಾಪಟುಗಳಿಗೆ ಸಲ್ಲುತ್ತದೆ. ಬೇಟಿ ಬಚಾವೋ, ಬೇಟಿ ಪಢಾವೋದ ಬ್ರಾಂಡ್ ಅಂಬಾಸಿಡರ್ ಆಗಿದ್ದ ಮಹಿಳೆಯರು ಈಗ ತಮ್ಮ ಹೆಜ್ಜೆಗಳನ್ನು ಹಿಂತಿರುಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಮಹಿಳಾ ಕುಸ್ತಿಪಟುಗಳನ್ನು ಅವಮಾನಿಸುವಾಗ ನಾನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತನಾಗಿ ನನ್ನ ಜೀವನವನ್ನು ನಡೆಸಲು ಸಾಧ್ಯವಿಲ್ಲ. ಆದ್ದರಿಂದ ನಾನು ನನ್ನ ಪ್ರಶಸ್ತಿಯನ್ನು ನಿಮಗೆ ಹಿಂದಿರುಗಿಸುತ್ತೇನೆ ಎಂದು ಬಜರಂಗ್ ಪೂನಿಯಾ ಅವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
ಜೊತೆಗೆ ಪೂನಿಯಾ ಅವರು ತಮ್ಮ ಪದ್ಮಶ್ರೀ ಪದಕವನ್ನ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಿಂದಿರುಗಿಸಲು ತೆರಳುತ್ತಿದ್ದಾಗ ದೆಹಲಿ ಪೊಲೀಸರು ತಡೆದ ನಂತರ ದೆಹಲಿಯ ಕಾರ್ತವ್ಯ ಪಥದ ಬಳಿಯ ಪಾದಚಾರಿ ಮಾರ್ಗದಲ್ಲಿ ತಮ್ಮ ಪದ್ಮಶ್ರೀ ಪದಕವನ್ನ ಬಿಟ್ಟು ಹೋಗಿದ್ದಾರೆ.